ರಾಯಚೂರು: ನವರಾತ್ರಿ ಮಹೋತ್ಸವದ ಅಂಗವಾಗಿ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿದ ರಾಯಚೂರು ನಗರ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಅವರು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.

ನಗರದ ಶ್ರೀ ಮಾತಾ ಜಮಲಮ್ಮ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಚಂಡಿ ಹೋಮದಲ್ಲಿ ಭಾಗವಹಿಸಿದ ಶಾಸಕರು, ಜಮಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಜನತೆಯ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.

ಬಳಿಕ ನಗರದ 18ನೇ ವಾರ್ಡ್‌ನ ಶ್ರೀ ಬನ್ನಿ ಕಾಳಿಕಾ ಮಾತಾ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಅಲ್ಲಿಂದ 13ನೇ ವಾರ್ಡ್‌ನ ಶ್ರೀ ಮಾರಿಕಾಂಬ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ 26ನೇ ವಾರ್ಡ್‌ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ನಗರದ 5ನೇ ವಾರ್ಡ್‌ನ ನಿಜಲಿಂಗಪ್ಪ ಕಾಲೋನಿಯ ಶ್ರೀ ಬಲಮುರಿ ವಿನಾಯಕ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಡಾ. ಎಸ್. ಶಿವರಾಜ್ ಪಾಟೀಲ್ ಪಾಲ್ಗೊಂಡರು.

ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಶಾಸಕ ಶಿವರಾಜ್ ಪಾಟೀಲ್ ಅವರ ದೇವಾಲಯಗಳ ಭೇಟಿಯು ನವರಾತ್ರಿ ಆಚರಣೆಯ ಭಾಗವಾಗಿತ್ತು.