ಸಿರವಾರ: ತಾಲೂಕಿನ ಮಾಡಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಹೊಸೂರು ಗ್ರಾಮದ ಶ್ರೀ ಘನಗುರು ಬೀರಲಿಂಗೇಶ್ವರ ದೇವಸ್ಥಾನದಲ್ಲಿ ದಸರಾ ಹಬ್ಬದ ಅಂಗವಾಗಿ ಸಾಂಪ್ರದಾಯಿಕ ಕಾರಣಿಕೆ (ಹೇಳಿಕೆ) ಕಾರ್ಯಕ್ರಮ ಜರುಗಿತು.
ದೇವಸ್ಥಾನದಲ್ಲಿ ನಡೆದ ಕಾರಣಿಕೆ ಸಂದರ್ಭದಲ್ಲಿ ‘ಮುಂಗಾರಿಗೆ ಬಂಗಾರದ ಮಳೆ, ಸಿಂಗಾರದ ಬೆಳೆ, ಹಿಂಗಾರಿಗೆ ಮುತ್ತು ಒಳದಿತ್ತು, ತಂಗಿ ವಳೆ ದಂಡಿಗೆ ನಾಡಿದಳು’ ಎಂದು ನುಡಿಯಲಾಯಿತು.
ಪ್ರತಿವರ್ಷ ದಸರಾ ಹಾಗೂ ಯುಗಾದಿ ಹಬ್ಬಗಳ ಸಂದರ್ಭದಲ್ಲಿ ಎರಡು ಬಾರಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕಾರಣಿಕೆ ನುಡಿಯುವ ಸಂಪ್ರದಾಯವಿದೆ. ಈ ಕಾರಣಿಕೆಯನ್ನು ಆಲಿಸಲು ಸ್ಥಳೀಯ ಭಕ್ತರಲ್ಲದೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಕೃಷಿ ಹಾಗೂ ಮಳೆಯ ಕುರಿತು ನುಡಿಯುವ ಕಾರಣಿಕೆಗೆ ಭಕ್ತರು ವಿಶೇಷ ಮಹತ್ವ ನೀಡುತ್ತಿದ್ದು, ಈ ಬಾರಿಯ ಕಾರಣಿಕೆಯಲ್ಲಿಯೂ ಮುಂಗಾರು ಮಳೆ ಮತ್ತು ಬೆಳೆ ಕುರಿತು ಉಲ್ಲೇಖವಾಗಿರುವುದು ಗಮನ ಸೆಳೆದಿದೆ.



