ಸಿರವಾರ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರು ಈ ಬಾರಿ ಬದಲಾವಣೆಯ ನಿರೀಕ್ಷೆಯಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾದ ಮತಗಟ್ಟೆಗೆ ಶಾಸಕ ಜಿ. ಹಂಪಯ್ಯನಾಯಕ ಅವರೊಂದಿಗೆ ಶುಕ್ರವಾರ ಭೇಟಿ ನೀಡಿ, ಮತದಾನ ಪ್ರಕ್ರಿಯೆ ಹಾಗೂ ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಶಿಕ್ಷಕ ಮತದಾರರು ಇದ್ದಾರೆ. ಬಿಜೆಪಿ ಅಭ್ಯರ್ಥಿ ಶಶಿಲ್ ಜಿ. ನಮೋಶಿ ಈಗಾಗಲೇ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ, ಈ ಬಾರಿ ಶಿಕ್ಷಕ ಸಮುದಾಯ ಹೊಸ ನಾಯಕತ್ವವನ್ನು ಬಯಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಶಾಸಕ ಜಿ. ಹಂಪಯ್ಯನಾಯಕ ಮಾತನಾಡಿ, ಶಿಕ್ಷಕರ ಸಮಸ್ಯೆಗಳು ಹಾಗೂ ಅವರ ಬೇಡಿಕೆಗಳಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾರರು ಮುಂದಾಗಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶಿಕ್ಷಕರನ್ನು ನೇರವಾಗಿ ಸಂಪರ್ಕಿಸಿ, ಕಾಂಗ್ರೆಸ್ ಅಭ್ಯರ್ಥಿ ಪರ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಕಾರ್ಯಕರ್ತರ ಸಂಘಟಿತ ಪ್ರಯತ್ನ ಹಾಗೂ ಶಿಕ್ಷಕರಿಂದ ದೊರೆಯುತ್ತಿರುವ ಬೆಂಬಲದಿಂದ ಶರಣಪ್ಪ ಮಟ್ಟೂರು ಗೆಲುವಿನ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬ್ರೀಜೇಶ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿ ಶಿವಕುಮಾರ, ಶರಣಯ್ಯನಾಯಕ ಗುಡದಿನ್ನಿ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ತಾಪಂ ಮಾಜಿ ಅಧ್ಯಕ್ಷ ದಾನನಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಜಿ ಚೌದ್ರಿ, ಮಾಜಿ ಅಧ್ಯಕ್ಷ ವೈ. ಭೂಪನಗೌಡ, ಮಾಜಿ ಉಪಾಧ್ಯಕ್ಷ ಚನ್ನಪ್ಪ ಗಡ್ಲ, ಸದಸ್ಯರಾದ ಹಸೇನ ಅಲಿ ಸಾಬ್, ಮೌಲಾಸಾಬ ವರ್ಚಸ್, ಮಾರ್ಕಪ್ಪ, ಬಸವರಾಜ ಗಡ್ಲ, ಅಮರೇಶ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



