ಸಿರವಾರ: ಬ್ರಿಟಿಷರ ಆಡಳಿತದ ವಿರುದ್ಧ ಹೋರಾಟ ನಡೆಸಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ವೀರಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಸಾಹಸ ಮತ್ತು ದೇಶಭಕ್ತಿ ಇಂದಿನ ಯುವಜನತೆಗೆ ಮಾದರಿಯಾಗಿದ್ದು, ಪಟ್ಟಣದಲ್ಲಿ ಒಂದು ವರ್ಷದೊಳಗೆ ಅವರ ಪುತ್ತಳಿ ಪ್ರತಿಷ್ಠಾಪಿಸಲು ಪ್ರಯತ್ನಿಸಲಾಗುವುದು ಎಂದು ಯುವ ಮುಖಂಡ ಎನ್. ಉದಯಕುಮಾರ ಸಾಹುಕಾರ ಹೇಳಿದರು.

ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ನಾಮಫಲಕಕ್ಕೆ ಶುಕ್ರವಾರ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಾಭಿಮಾನ ಹಾಗೂ ಗೌರವದಿಂದ ಬದುಕಲು ಸ್ವಾತಂತ್ರ್ಯ ಅತ್ಯಗತ್ಯ ಎಂಬುದನ್ನು ರಾಣಿ ಚೆನ್ನಮ್ಮ ಅಂದಿನ ಕಾಲದಲ್ಲಿಯೇ ಅರಿತುಕೊಂಡಿದ್ದರು. ಬ್ರಿಟಿಷರ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಧೈರ್ಯದಿಂದ ಹೋರಾಡಿದ ಅವರ ಜೀವನ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ ಎಂದು ತಿಳಿಸಿದರು.

ಬ್ರಿಟಿಷರು ಜಾರಿಗೆ ತಂದಿದ್ದ ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕು ನಿರಾಕರಿಸುವ ನೀತಿಯನ್ನು ವಿರೋಧಿಸಿದ್ದ ರಾಣಿ ಚೆನ್ನಮ್ಮ, ಬ್ರಿಟಿಷರಿಗೆ ಕಪ್ಪಕಾಣಿಕೆ ಸಲ್ಲಿಸಲು ನಿರಾಕರಿಸಿ ತಮ್ಮ ಸ್ವಾಭಿಮಾನ ಮೆರೆದಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.

ಇಂತಹ ಮಹಾನ್ ಹೋರಾಟಗಾರ್ತಿಯ ಸ್ಮರಣಾರ್ಥ ಸಿರವಾರ ಪಟ್ಟಣದಲ್ಲಿ ಪುತ್ತಳಿ ಸ್ಥಾಪಿಸುವುದು ಅಗತ್ಯವಾಗಿದ್ದು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಮುಂದಿನ ಒಂದು ವರ್ಷದೊಳಗೆ ಪ್ರತಿಷ್ಠಾಪನೆ ಕಾರ್ಯ ಕೈಗೊಳ್ಳುವ ಉದ್ದೇಶವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎನ್. ಚಂದ್ರಶೇಖರ ಸಾಹುಕಾರ, ವೀರೇಶ ಗಣೇಕಲ್, ಸೂಗಪ್ಪ ಹೂಗಾರ, ಆದೇಶ ಸಾಹುಕಾರ, ಸುರೇಶ ಠಾಣಗುಂದಿ, ಎನ್. ವೀರೇಶ, ಮಂಜುನಾಥ ಚಿತ್ತಾಪೂರು, ತಾಯಣ್ಣ ವಕೀಲ, ವೀರಭದ್ರ ಚಿತ್ತಾಪೂರು, ಸುರೇಶ ಹೀರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.