ಸಿರವಾರ: ಬ್ರಿಟಿಷರ ಆಳ್ವಿಕೆಯ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಅವರು ಕೇವಲ ತಮ್ಮ ಸಂಸ್ಥಾನದ ರಕ್ಷಣೆಗಾಗಿ ಹೋರಾಟ ನಡೆಸದೆ, ನಾಡಿನ ಸ್ವಾಭಿಮಾನ, ಹಕ್ಕು ಹಾಗೂ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶ್ರಮಿಸಿದ ವೀರಮಹಿಳೆಯಾಗಿದ್ದು, ಅವರ ಬದುಕು ಇಂದಿನ ಮಹಿಳೆಯರಿಗೆ ಸ್ಫೂರ್ತಿಯಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಜಿ ಚೌದ್ರಿ ಹೇಳಿದರು.

ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಬ್ರಿಟಿಷರ ದಬ್ಬಾಳಿಕೆಗೆ ಮಣಿಯದೆ ಧೈರ್ಯದಿಂದ ಹೋರಾಡಿದ ರಾಣಿ ಚೆನ್ನಮ್ಮ ಅವರ ದೇಶಪ್ರೇಮ ಹಾಗೂ ಸ್ವಾಭಿಮಾನದ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಅವರ ಆದರ್ಶಗಳಿಂದ ಪ್ರೇರಣೆ ಪಡೆದು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಾರ್ಕಪ್ಪ ಮಾತನಾಡಿ, ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ರಾಣಿ ಚೆನ್ನಮ್ಮ ನಡೆಸಿದ ಹೋರಾಟ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ. ಅನ್ಯಾಯದ ಮುಂದೆ ತಲೆಬಾಗದೆ ಸ್ವಾಭಿಮಾನದಿಂದ ಬದುಕಬೇಕೆಂಬ ಸಂದೇಶವನ್ನು ಅವರು ನೀಡಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ, ಭ್ರಷ್ಟಾಚಾರ, ಜಾತಿ ತಾರತಮ್ಯ ಹಾಗೂ ಸಾಮಾಜಿಕ ಅನ್ಯಾಯದಂತಹ ಸಮಸ್ಯೆಗಳು ಮುಂದುವರಿದಿವೆ. ಇಂತಹ ಸಂದರ್ಭಗಳಲ್ಲಿ ಅನ್ಯಾಯವನ್ನು ಕಂಡರೂ ಮೌನವಾಗಿರುವ ಮನೋಭಾವ ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗನ್ನಾಥ ಜೋಷಿ ಮಾತನಾಡಿ, ರಾಣಿ ಚೆನ್ನಮ್ಮ ಅವರ ಧೈರ್ಯ ಮತ್ತು ಹೋರಾಟದ ಮನೋಭಾವವನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸಬಾರದು. ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅವಕಾಶ ಹಾಗೂ ಆತ್ಮವಿಶ್ವಾಸದಿಂದ ಬದುಕುವ ವಾತಾವರಣ ಕಲ್ಪಿಸಿಕೊಡಬೇಕು. ಇತಿಹಾಸದ ಮಹನೀಯರನ್ನು ಗೌರವಿಸುವುದರ ಜೊತೆಗೆ ಅವರ ಆದರ್ಶಗಳನ್ನು ದೈನಂದಿನ ಜೀವನದಲ್ಲಿ ಅನುಸರಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಹಸೇನ ಅಲಿ ಸಾಬ್, ಅಜೀತಕುಮಾರ ಹೊನ್ನಟಗಿ, ಮೌಲಾಸಾಬ ವರ್ಚಸ್, ರಂಗನಾಥ, ಬಂದೇನವಾಜ್, ಸಮುದಾಯ ಸಂಘಟನಾಧಿಕಾರಿ ಹಂಪಯ್ಯ ಪಾಟೀಲ್, ವೀರೇಶ ಗಣೇಕಲ್, ಆದೇಶ ಸಾಹುಕಾರ, ಸುರೇಶ ಠಾಣಗುಂದಿ, ಶರಣು ನಾಗೋಲಿ, ಎನ್. ವೀರೇಶ, ಮಂಜುನಾಥ ಚಿತ್ತಾಪೂರು, ತಾಯಣ್ಣ ವಕೀಲ, ವೀರಭದ್ರ ಚಿತ್ತಾಪೂರು, ಸುನೀತಾ ಸಜ್ಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.