ತುರ್ವಿಹಾಳ: ಪರಿಸರ ಸಂರಕ್ಷಣೆ ಹಾಗೂ ಹಸಿರೀಕರಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ವನಸಿರಿ ಫೌಂಡೇಶನ್ ಅಧ್ಯಕ್ಷ, ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪುರ ಅವರಿಗೆ ತುರ್ವಿಹಾಳ ಪಟ್ಟಣದ ಶ್ರೀ ಸದ್ಗುರು ಸರ್ವೇಶ್ವರ ಮಠದ ವತಿಯಿಂದ 2026ನೇ ಸಾಲಿನ ಪ್ರತಿಷ್ಠಿತ ‘ಪರಮ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಟ್ಟಣದ ಶ್ರೀ ಸದ್ಗುರು ಸರ್ವೇಶ್ವರ ಮಠದಲ್ಲಿ ಪರಮಪೂಜ್ಯ ಶ್ರೀ ಗುರು ಗುಂಡಯ್ಯ ಅಪ್ಪಯ್ಯನವರು, ಮಾತೋಶ್ರೀ ಈರಮ್ಮ ಅಮ್ಮನವರು ಹಾಗೂ ದಾಸೋಹಮೂರ್ತಿ ಶ್ರೀ ಗುರು ರಾಚಯ್ಯ ತಾತನವರ ಪುಣ್ಯಾರಾಧನೆ ಅಂಗವಾಗಿ ಆಯೋಜಿಸಿದ್ದ 177ನೇ ಜಾತ್ರಾ ಮಹೋತ್ಸವ ಹಾಗೂ 117ನೇ ವಚನ ಪ್ರವಚನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ತುಲಾಭಾರ ಕಾರ್ಯಕ್ರಮ ಹಾಗೂ ‘ನಿಶ್ಶಬ್ದ ಬ್ರಹ್ಮ ವಚನ ಸಂಪುಟ’ ಗ್ರಂಥದ ಲೋಕಾರ್ಪಣೆ ಸಮಾರಂಭವೂ ನಡೆಯಿತು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪರಿಸರ ಸಂರಕ್ಷಣೆ, ಗಿಡಮರಗಳ ಪೋಷಣೆ ಹಾಗೂ ಹಸಿರೀಕರಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಮರೇಗೌಡ ಮಲ್ಲಾಪುರ ಅವರು ವನಸಿರಿ ಫೌಂಡೇಶನ್ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ. ವಿಶೇಷವಾಗಿ ‘ಅಮರ ಶ್ರೀ ಆಲದಮರ’ಕ್ಕೆ ಪುನರ್ಜೀವ ನೀಡುವ ಕಾರ್ಯದಲ್ಲಿ ಅವರ ಕೊಡುಗೆಯನ್ನು ಪರಿಗಣಿಸಿ ಶ್ರೀಮಠದ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ ಎಂಬ ಅಭಿಪ್ರಾಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗುಂಡಯ್ಯ ಅಪ್ಪನವರು, ಚಿದಾನಂದ ಗುರುವಿನಮಠ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸೇರಿದಂತೆ ಶ್ರೀಮಠದ ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



