ಸಿಂಧನೂರು: ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆಗೆ ಡಿಸೆಂಬರ್ 31ರವರೆಗೆ ನಿರಂತರವಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು 'ನಮ್ಮ ನೀರು ನಮ್ಮ ಹಕ್ಕು' ಘೋಷಣೆಯಡಿ ಬೃಹತ್ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ನವೆಂಬರ್ 20ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸುವ ನಿರ್ಧಾರವನ್ನು ಕೈಬಿಟ್ಟು, ಡಿಸೆಂಬರ್ ಅಂತ್ಯದವರೆಗೆ ನೀರು ಪೂರೈಸಬೇಕು. ಬೆಳೆಗಳು ಸಮರ್ಪಕವಾಗಿ ರೈತರ ಕೈ ಸೇರಬೇಕಾದರೆ ಕೊನೆಯ ಹಂತದವರೆಗೂ ನೀರಿನ ಅವಶ್ಯಕತೆಯಿದೆ. ಮಧ್ಯದಲ್ಲಿಯೇ ನೀರು ಸ್ಥಗಿತಗೊಳಿಸಿದರೆ ಬೆಳೆಗಳು ಒಣಗಿ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಮಳೆ ಕೊರತೆ ಹಾಗೂ ಬರಗಾಲದ ಪರಿಸ್ಥಿತಿಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನೀರಾವರಿ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಪೂರೈಸದಿದ್ದರೆ ರೈತರ ಬದುಕು ಮತ್ತಷ್ಟು ದುಸ್ತರವಾಗಲಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳು ಕೈಗೆ ಸಿಗದಂತಾದರೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲುವೆ ನೀರಿನ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಮಾತ್ರವಲ್ಲದೆ ಜಾನುವಾರುಗಳ ಮೇವು ಹಾಗೂ ಕುಡಿಯುವ ನೀರಿನ ಲಭ್ಯತೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಹಳ್ಳಗಳಿಗೆ ನೀರು ಹರಿಸದಿರುವುದರಿಂದ ಜಾನುವಾರುಗಳು, ಪ್ರಾಣಿ-ಪಕ್ಷಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತರು ತಿಳಿಸಿದರು.
ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ತಿಳಿದಿಲ್ಲ. ಆದರೆ ರೈತರ ಹಿತದೃಷ್ಟಿಯಿಂದ ಡಿಸೆಂಬರ್ 31ರವರೆಗೆ ಕಾಲುವೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ಸಿಂಧನೂರು ಮತ್ತು ಮಸ್ಕಿ ತಾಲೂಕಿನ ರೈತರ ಬೆಳೆಗಳನ್ನು ಉಳಿಸಲು ಸರ್ಕಾರ ಹಾಗೂ ನೀರಾವರಿ ಇಲಾಖೆ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ನೀರಿನ ಲಭ್ಯತೆ ಹಾಗೂ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ಕೈ ಸೇರುವವರೆಗೂ ನೀರಾವರಿ ಸೌಲಭ್ಯ ಒದಗಿಸುವುದು ಅಗತ್ಯವಾಗಿದೆ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರಿಬಸವ ನಗರದ ರಂಭಾಪುರಿ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಯದ್ದಲದೊಡ್ಡಿಯ ಶ್ರೀ ಮಹಾಲಿಂಗ ಸ್ವಾಮೀಜಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಡಾ. ನಾಗವೇಣಿ ಪಾಟೀಲ್, ನಿರುಪಾದಿ ಗೋಮರ್ಸಿ, ಬಸವರಾಜ ಗೋಡಿಹಾಳ, ಅಮೀನ್ ಪಾಷಾ ದಿದ್ದಗಿ, ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ವೀರೇಶ ಬಾವಿಮನಿ, ಮಂಜುನಾಥ ಗಾಣಿಗೇರ, ದೌಲಸಾಬ ದೊಡ್ಡಮನಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.



