ರಾಯಚೂರು: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಸತತ ಐದನೇ ಬಾರಿಗೆ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ನಮೋಶಿ ಅವರ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ವಿತರಿಸಿ ಸಂಭ್ರಮಿಸಿದರು. ಬಿಜೆಪಿ ಪರ ಘೋಷಣೆಗಳನ್ನು ಕೂಗಿ ವಿಜಯದ ಸಂತಸ ಹಂಚಿಕೊಂಡರು.
ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ರಾಜಗುರು ಮಾತನಾಡಿ, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ. ನಮೋಶಿ ಅವರಿಗೆ ಮತ್ತೊಮ್ಮೆ ದೊರೆತ ಜನಾದೇಶವು ಅವರ ಕಾರ್ಯವೈಖರಿ ಹಾಗೂ ನಾಯಕತ್ವದ ಮೇಲೆ ಶಿಕ್ಷಕ ಮತದಾರರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರು ಹಾಗೂ ಪದವೀಧರ ಮತದಾರರು ಬಿಜೆಪಿ ಮತ್ತು ಎನ್ಡಿಎ ಅಭ್ಯರ್ಥಿಗಳ ಪರ ವ್ಯಕ್ತಪಡಿಸಿರುವ ಬೆಂಬಲವು ಪಕ್ಷದ ಸಂಘಟನಾತ್ಮಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಚುನಾವಣೆಯ ಫಲಿತಾಂಶವು ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷಕ್ಕೆ ಹೊಸ ಹುರುಪು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಚುನಾವಣೆಯ ಗೆಲುವಿನ ಉತ್ಸಾಹವನ್ನು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು. ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಳಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಮುಖಂಡರಾದ ರವೀಂದ್ರ ಜಲ್ದಾರ್, ಶರಣಬಸವ ಜೋಳದಡಗಿ, ಮಲ್ಲಿಕಾರ್ಜುನ ಪಾಟೀಲ್, ಪಲುಗುಲ ನಾಗರಾಜ ಸೇರಿದಂತೆ ಶರಣಮ್ಮ, ಮಹಿಳಾ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.



