ರಾಯಚೂರು: ತಾಲೂಕಿನ ಮಮದಾಪುರ ಗ್ರಾಮದಲ್ಲಿ ಅಪ್ಪು ಸರ್ ಸೇವಾ ಸಮಿತಿ ಹಾಗೂ ಸಿದ್ದು ಸೂರ್ಯವಂಶಿ ಗೆಳೆಯರ ಬಳಗದ ನೇತೃತ್ವದಲ್ಲಿ ಅಕ್ಟೋಬರ್ 29ರಂದು ಸಂಜೆ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲಾಯಿತು.

ಕಿಲ್ಲೇ ಬೃಹನ್ಮಠದ ಪೂಜ್ಯ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಮಠದ ಪ್ರಧಾನ ಕಾರ್ಯದರ್ಶಿ ವೇದಮೂರ್ತಿ ರೇಣುಕಾರಾಧ್ಯಯ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರೂಪ ಶ್ರೀನಿವಾಸ ನಾಯಕ, ಮಮದಾಪುರ ಗ್ರಾಮವು ಮಮತೆಯ ಹಾಗೂ ಸಾಂಸ್ಕೃತಿಕ ಪರಂಪರೆಯ ಗ್ರಾಮವಾಗಿದೆ. ಇಲ್ಲಿ ಶರನ್ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಯುವಕರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ, ದುಶ್ಚಟಗಳಿಂದ ದೂರವಿರುವಂತೆ ಪ್ರೇರೇಪಿಸಲಾಗುತ್ತಿದೆ. ಶಾಂಭವಿ ಮಾಲಾಧಾರಣೆಯ ಮೂಲಕ ಯುವಕರಿಗೆ ಶಿವಧ್ಯಾನ, ಶಿವಚಿಂತನೆ ಹಾಗೂ ಸನ್ಮಾರ್ಗದ ಮಹತ್ವ ತಿಳಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಪುನೀತ್ ರಾಜ್‌ಕುಮಾರ್ ಅವರು ಕೇವಲ ಚಿತ್ರನಟರಾಗಿ ಮಾತ್ರವಲ್ಲದೆ, ಮಾನವೀಯ ಮೌಲ್ಯಗಳು ಮತ್ತು ಸಮಾಜಸೇವೆಯ ಮೂಲಕ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಯುವಜನತೆಗೆ ಮಾದರಿಯಾಗಿದೆ. 'ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ, ನೀನೇ ರಾಜಕುಮಾರ' ಎಂಬ ಹಾಡಿನ ಸಾಲುಗಳನ್ನು ಸ್ಮರಿಸಿದ ಅವರು, ಪುನೀತ್ ಅವರ ಜೀವನ ಮತ್ತು ಆದರ್ಶಗಳು ಯುವಕರಿಗೆ ಸದಾ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.

ಯರಗೇರಾ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಕಾಶ ಡಂಬಾಳ ಮಾತನಾಡಿ, ಇಂದಿನ ಯುವಜನತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮೊಬೈಲ್ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿದ್ಯಾರ್ಥಿಗಳು ಓದು ಮತ್ತು ಉತ್ತಮ ಹವ್ಯಾಸಗಳಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ರೀಲ್ಸ್‌ಗಳ ವ್ಯಾಮೋಹಕ್ಕೆ ಒಳಗಾಗದೆ ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮದ್ಯಪಾನ, ಅಫೀಮು, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆಯಿಂದ ಯುವಜನರ ಭವಿಷ್ಯ ಹಾಳಾಗುವುದಲ್ಲದೆ ಅಪರಾಧ ಚಟುವಟಿಕೆಗಳಿಗೂ ದಾರಿಯಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ, ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಲು ಮುಂದಾಗಬೇಕು. ಪ್ರತಿಯೊಬ್ಬರೂ ಪುನೀತ್ ರಾಜ್‌ಕುಮಾರ್ ಅವರಷ್ಟು ಸಮಾಜಸೇವೆ ಮಾಡಲು ಸಾಧ್ಯವಾಗದಿದ್ದರೂ ಅವರ ಸರಳತೆ, ಮಾನವೀಯತೆ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಮುರಳಿ ರಾವ್ ಶಿಂಧೆ, ಯರಗೇರಾ ಪಿಎಸ್‌ಐ ಪ್ರಕಾಶ ಡಂಬಾಳ, ಎಎಸ್‌ಐ ಶಿವಾಜಿ ಡೋಣಿ, ಓಂಕಾರ್ ಯಾದವ್, ರಾಜೇಂದ್ರ ಶಿವಾಳೆ, ಸಂಧ್ಯಾ ನಾಯಕ, ನರಸಿಂಹಲು ಮಡಿವಾಳ, ಗುರುರಾಜ್ ಪೊನ್ನೂರು, ಸಂತೋಷ್, ಮರೆಪ್ಪ ನಾಯಕ, ಪೊಲೀಸ್ ಕಾನ್‌ಸ್ಟೆಬಲ್ ಶಂಕ್ರಪ್ಪ, ಭಾಗ್ಯ ಕನ್ನಡತಿ ಸೇರಿದಂತೆ ಹಲವು ಸಾಧಕರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಸಮಾಜಮುಖಿ ಕಾರ್ಯಗಳು, ಮಾನವೀಯ ಸೇವೆ ಹಾಗೂ ಯುವಜನತೆಗೆ ನೀಡಿದ ಪ್ರೇರಣೆಯನ್ನು ಸ್ಮರಿಸಲಾಯಿತು. ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸುವ ಉದ್ದೇಶವನ್ನು ಆಯೋಜಕರು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಪ್ಪು ಸರ್ ಸೇವಾ ಸಮಿತಿಯ ಪದಾಧಿಕಾರಿಗಳು, ಸಿದ್ದು ಸೂರ್ಯವಂಶಿ ಗೆಳೆಯರ ಬಳಗದ ಸದಸ್ಯರು, ಗ್ರಾಮದ ಮುಖಂಡರು, ಹಿರಿಯರು, ಗಣ್ಯರು, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಯುವಕರು ಉಪಸ್ಥಿತರಿದ್ದರು.