ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ, ಆರ್ಥಿಕ ಇಲಾಖೆಯ ಅನುಮೋದನೆ ಪಡೆಯದೆ 75 ಹುದ್ದೆಗಳಿಗೆ ನೇಮಕಾತಿ ನಡೆಸಲಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ವಿರೂಪಾಕ್ಷಿ, ನೇಮಕಾತಿ ಆದೇಶಗಳನ್ನು ತಕ್ಷಣ ತಡೆಹಿಡಿದು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಅಧೀನ ಕಾರ್ಯದರ್ಶಿಯ ಆದೇಶ ಹಾಗೂ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಆರ್ಥಿಕ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯದೆ ನೇಮಕಾತಿ ಮಾಡಿರುವುದರಿಂದ ಆಯ್ಕೆಯಾದ 75 ಅಭ್ಯರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದೆ ಎಂದು ಆರೋಪಿಸಿದರು.
ನಿಯಮಬಾಹಿರ ನೇಮಕಾತಿಯಿಂದಾಗಿ ಅಭ್ಯರ್ಥಿಗಳ ಉದ್ಯೋಗ ಭದ್ರತೆ ಪ್ರಶ್ನಾರ್ಹವಾಗಿದೆ. ಮುಂದಿನ ದಿನಗಳಲ್ಲಿ ಅವರ ಭವಿಷ್ಯಕ್ಕೆ ಯಾರು ಹೊಣೆಗಾರರಾಗುತ್ತಾರೆ ಎಂಬುದನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ವಿಶ್ವವಿದ್ಯಾಲಯದ ಕುಲಪತಿಗಳು ಅಕ್ಟೋಬರ್ 27ರಂದು ನಿವೃತ್ತರಾಗುವ ಸಂದರ್ಭದಲ್ಲಿ, ಅರ್ಹತೆ ಹೊಂದಿರುವ ಹಿರಿಯ ಅಧಿಕಾರಿಗಳನ್ನು ಪರಿಗಣಿಸದೆ ತಮ್ಮ ಆಪ್ತರಾಗಿರುವ ಗ್ರಂಥಾಲಯ ವ್ಯವಸ್ಥಾಪಕ ಮಚೇಂದ್ರನಾಥ್ ಅವರಿಗೆ ಪ್ರಭಾರ ಕುಲಪತಿ ಜವಾಬ್ದಾರಿ ನೀಡಲಾಗಿದೆ ಎಂದು ಆರೋಪಿಸಿದರು.
ಶ್ರೀನಿವಾಸ್ ಸೇರಿದಂತೆ ಅರ್ಹ ಅಧಿಕಾರಿಗಳನ್ನು ಕಡೆಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿವೃತ್ತಿಯ ನಂತರವೂ ರಾಜಣ್ಣ, ಮಲ್ಲಿಕಾರ್ಜುನ ಹಾಗೂ ಹನುಮಂತಪ್ಪ ಅವರು ಸೇರಿಕೊಂಡು ರಾತ್ರೋರಾತ್ರಿ ನೇಮಕಾತಿ ಆದೇಶಗಳನ್ನು ಹೊರಡಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿರುವ ಶಂಕೆಯಿದ್ದು, ಹಣ ಪಡೆದು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರದ ಆದೇಶಗಳು, ಅರ್ಹತಾ ಮಾನದಂಡಗಳು ಹಾಗೂ ಆರ್ಥಿಕ ಇಲಾಖೆಯ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ನೇಮಕಾತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಶಕ್ಕೆ ಪಡೆದು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಕುಲಪತಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳು ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕೂಡಲೇ ಮಧ್ಯಪ್ರವೇಶಿಸಿ ವಿವಾದಿತ ನೇಮಕಾತಿ ಆದೇಶಗಳನ್ನು ತಡೆಹಿಡಿಯಬೇಕು. ಆರೋಪಗಳು ಸಾಬೀತಾದಲ್ಲಿ ನೇಮಕಾತಿಗಳನ್ನು ರದ್ದುಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಹನುಮಂತಪ್ಪ, ರಾಜಣ್ಣ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಆರೋಪಗಳು ದೃಢಪಟ್ಟಲ್ಲಿ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಎಂದು ಎಂ. ವಿರೂಪಾಕ್ಷಿ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನರಸಪ್ಪ ಆಶಾಪುರ, ನರಸಿಂಹಲು ಕಟ್ಟಿಮನಿ, ಎಸ್. ರಾಜು, ರವಿ, ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.



