ರಾಯಚೂರು: ರಾಯಚೂರು ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದ ಕಾಂಗ್ರೆಸ್ ಸರ್ಕಾರ ₹200 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ಇದುವರೆಗೂ ಎರಡು ರೂಪಾಯಿ ಅನುದಾನವನ್ನೂ ನೀಡಿಲ್ಲ ಎಂದು ಎಐಎಂಐಎಂ ಪಕ್ಷದ ರಾಯಚೂರು ನಗರ ಅಧ್ಯಕ್ಷ ಶಬೀರ್ ಅಹ್ಮದ್ ಹೌದಡಿ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆಗೆ ಅಗತ್ಯ ಅನುದಾನ ಒದಗಿಸದಿರುವುದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಮತ್ತು ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಅಜಯ್ ಸಿಂಗ್ ಅವರು ನಗರಕ್ಕೆ ಭೇಟಿ ನೀಡಿದಾಗ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಹಿಂದಿರುಗುತ್ತಾರೆ. ಆದರೆ ನಗರದ ಒಳಭಾಗಗಳಲ್ಲಿರುವ ಸಮಸ್ಯೆಗಳು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಟೀಕಿಸಿದರು.

ನಗರದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈಗಾಗಲೇ 17 ವಿಷಯಗಳನ್ನು ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೂ ಒಂದೇ ಒಂದು ಸಮಸ್ಯೆಗೂ ಸಮರ್ಪಕ ಉತ್ತರ ದೊರೆತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಉಸ್ತುವಾರಿ ಸಚಿವರ ಭೇಟಿ ಕೇವಲ ಔಪಚಾರಿಕತೆಗೆ ಸೀಮಿತವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 24 ಪೊಲೀಸ್ ಉಪನಿರೀಕ್ಷಕರ ಹಾಗೂ 127 ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿಯಿವೆ. ಸಿಬ್ಬಂದಿ ಕೊರತೆಯಿಂದ ಅಪರಾಧ ನಿಯಂತ್ರಣ, ರಾತ್ರಿ ಗಸ್ತು, ಪ್ರಕರಣಗಳ ತನಿಖೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ತೊಂದರೆಯಾಗುತ್ತಿದೆ. ಸರ್ಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆಯಲ್ಲಿ ಗ್ರೇಡ್ ‘ಎ’ ವಿಭಾಗದಲ್ಲಿ 11, ಗ್ರೇಡ್ ‘ಬಿ’ ವಿಭಾಗದಲ್ಲಿ 10 ಅಧಿಕಾರಿಗಳ ಕೊರತೆಯಿದ್ದು, ಗ್ರೇಡ್ ‘ಸಿ’ ವಿಭಾಗದಲ್ಲಿ 8 ಹಾಗೂ ಗ್ರೇಡ್ ‘ಡಿ’ ವಿಭಾಗದಲ್ಲಿ 71 ಹುದ್ದೆಗಳು ಖಾಲಿಯಿವೆ. ಒಟ್ಟು 520 ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿದರೂ ಅದಕ್ಕೆ ಅನುಗುಣವಾಗಿ ಹೆಚ್ಚುವರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನೇಮಿಸಿಲ್ಲ. ಇದರಿಂದ ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಮತ್ತು ನಿಯಮಾನುಸಾರ ಕಾಯಂಗೊಳಿಸುವ ಸಾಧ್ಯತೆಗಳ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣಕ್ಕೆ ಆಗಮಿಸುವ ಸಂದರ್ಭದಲ್ಲಿ ಎಐಎಂಐಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು. ಸರ್ಕಾರ ಘೋಷಿಸಿದ ₹200 ಕೋಟಿ ಅನುದಾನದ ಸ್ಥಿತಿಗತಿ, ಪಾಲಿಕೆಯ ಸಿಬ್ಬಂದಿ ಕೊರತೆ ಹಾಗೂ ಸಾರ್ವಜನಿಕರ 17 ಪ್ರಮುಖ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಶಬೀರ್ ಅಹ್ಮದ್ ಹೌದಡಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶೈಬಜ್ ಖಾನ್, ಸಮೀರ್ ಅಹ್ಮದ್ ಖಾನ್, ಪ್ರವೀಣ ಬೇಗಂ, ಸಂತೋಷ್ ಸೂರ್ಯವಂಶಿ, ಈರಾಣೇಶ್ ಭೋವಿ, ರೆಹಮಾನ್ ಹಾಗೂ ಇರ್ಫಾನ್ ಖಾನ್ ಉಪಸ್ಥಿತರಿದ್ದರು.