ಮಾನ್ವಿ: ಮಕ್ಕಳು ಅಪರಿಚಿತ ವ್ಯಕ್ತಿಗಳಿಂದ ಯಾವುದೇ ರೀತಿಯ ಕಿರುಕುಳ, ಮಾನಸಿಕ ಹಿಂಸೆ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಲ್ಲಿ ಭಯಪಡದೆ ತಕ್ಷಣ ಪಾಲಕರು, ಶಿಕ್ಷಕರು ಅಥವಾ ಶಾಲೆಯ ಮುಖ್ಯಗುರುಗಳಿಗೆ ಮಾಹಿತಿ ನೀಡಬೇಕು. ಇದರಿಂದ ಕಾನೂನಿನ ರಕ್ಷಣೆ ಹಾಗೂ ಅಗತ್ಯ ನೆರವು ಪಡೆಯಲು ಸಾಧ್ಯವಾಗುತ್ತದೆ ಎಂದು ಕಿರಿಯ ಸಿವಿಲ್ ನ್ಯಾಯಾಧೀಶ ಆನಂದ ಎಚ್. ಕೊಣ್ಣೂರು ತಿಳಿಸಿದರು.
ತಾಲೂಕಿನ ಕಾತರಕಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ‘ಸುರಕ್ಷಿತ್ ಬಚ್ಪನ್ ಅಭಿಯಾನ’ದ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸುರಕ್ಷತೆ ಮತ್ತು ಅವರ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಕ್ಕಳು ತಮ್ಮ ಮೇಲೆ ನಡೆಯುವ ಯಾವುದೇ ರೀತಿಯ ದೌರ್ಜನ್ಯ ಅಥವಾ ಕಿರುಕುಳವನ್ನು ಮುಚ್ಚಿಡದೆ ವಿಶ್ವಾಸಾರ್ಹ ಹಿರಿಯರ ಗಮನಕ್ಕೆ ತರಬೇಕು. ಇಂತಹ ಸಂದರ್ಭಗಳಲ್ಲಿ ಪಾಲಕರು ಮತ್ತು ಶಿಕ್ಷಕರು ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ಧೈರ್ಯ ತುಂಬುವುದರ ಜೊತೆಗೆ ಸೂಕ್ತ ಕಾನೂನು ನೆರವು ದೊರಕಿಸಿಕೊಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವುದರಿಂದ ದೌರ್ಜನ್ಯ, ಶೋಷಣೆ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಧೈರ್ಯ ಬೆಳೆಯುತ್ತದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅವರ ಹಕ್ಕುಗಳು, ವೈಯಕ್ತಿಕ ಸುರಕ್ಷತೆ ಹಾಗೂ ಕಾನೂನಿನ ರಕ್ಷಣೆಯ ಕುರಿತು ತಿಳಿವಳಿಕೆ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ವಕೀಲ ಯಲ್ಲಪ್ಪ ಹಿರೇಬಾದರದಿನ್ನಿ ಮಾತನಾಡಿ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿಗಳು ಕಾನೂನುಬಾಹಿರವಾಗಿವೆ. ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಂಡು ಅವರನ್ನು ಕೃಷಿ ಅಥವಾ ಇತರ ದುಡಿಮೆಯಲ್ಲಿ ತೊಡಗಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಪ್ರತಿಯೊಂದು ಮಗುವಿಗೂ ಶಿಕ್ಷಣ ಪಡೆಯುವ, ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಹಾಗೂ ಶೋಷಣೆಯಿಂದ ಮುಕ್ತವಾಗಿ ಬದುಕುವ ಹಕ್ಕಿದೆ ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದವರು ಹಾಗೂ ಕಾನೂನು ನೆರವಿನ ಅಗತ್ಯವಿರುವ ಅರ್ಹ ವ್ಯಕ್ತಿಗಳು ತಾಲೂಕು ಕಾನೂನು ಸೇವಾ ಸಮಿತಿಯ ಮೂಲಕ ಉಚಿತ ಕಾನೂನು ನೆರವು ಪಡೆಯಬಹುದು. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಮನಿ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಶಿವಪ್ಪ ನಾಯಕ, ವಕೀಲರಾದ ಶ್ರೀನಿವಾಸ, ಶಕೀಲ ಬದಾಯಿ, ಗೂಗಲ್ ನಾಗರಾಜ್, ಶಾಲೆಯ ಮುಖ್ಯಗುರು ಎಚ್.ಟಿ. ಪ್ರಕಾಶ ಬಾಬು, ಸಿಆರ್ಪಿ ಕಾಶೀನಾಥ, ಬಿಆರ್ಪಿ ಸಿದ್ಧಲಿಂಗಯ್ಯ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



