ಮಾನ್ವಿ: ತಾಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಬೇಸಿಗೆ ಅವಧಿಯಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಗ್ರಾಮದ ಕುಡಿಯುವ ನೀರಿನ ಕೆರೆಯನ್ನು ಕಾಲುವೆ ನೀರಿನಿಂದ ಭರ್ತಿ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಖಾಲಿದ್ ಅಹಮ್ಮದ್ ತಿಳಿಸಿದರು.

ತಾಲೂಕಿನ ಬ್ಯಾಗವಾಟ ಗ್ರಾಮದ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ, ನೀರಿನ ಸಂಗ್ರಹ ಹಾಗೂ ನಿರ್ವಹಣೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬ್ಯಾಗವಾಟ ಗ್ರಾಮದ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಲು ಕಾಲುವೆಯ ಮೂಲಕ ಕೆರೆಗೆ ನೀರು ಹರಿಸಿ ಭರ್ತಿ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಬೇಸಿಗೆಯವರೆಗೂ ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ವಹಿಸಲಾಗುವುದು. ನೀರಿನ ಅನಗತ್ಯ ಪೋಲು ತಡೆಗಟ್ಟುವುದರ ಜೊತೆಗೆ ಗ್ರಾಮಸ್ಥರಿಗೆ ನಿರಂತರವಾಗಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬರಗಾಲದ ಸಂದರ್ಭದಲ್ಲಿ ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸುವುದು ಹಾಗೂ ಲಭ್ಯವಿರುವ ನೀರನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನೀರಿನ ಸಂಗ್ರಹ ಮತ್ತು ವಿತರಣೆಯ ಬಗ್ಗೆ ವಿಶೇಷ ಗಮನಹರಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಬ್ಯಾಗವಾಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ, ಪೋತ್ನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಕ್ತರ್ ಸಾಬ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.