ಮಟಮಾರಿ: ಪಾರ್ಶ್ವವಾಯು ಸಂಭವಿಸಿದ ಸಂದರ್ಭದಲ್ಲಿ ಪ್ರತಿ ನಿಮಿಷವೂ ಅತ್ಯಂತ ಅಮೂಲ್ಯವಾಗಿದ್ದು, ಆರಂಭಿಕ ಲಕ್ಷಣಗಳನ್ನು ಗುರುತಿಸಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸುವುದರಿಂದ ಜೀವ ಉಳಿಸುವುದರ ಜೊತೆಗೆ ಶಾಶ್ವತ ಅಂಗವೈಕಲ್ಯದ ಅಪಾಯವನ್ನೂ ಕಡಿಮೆ ಮಾಡಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ್ ಕುಮಾರ್ ತಿಳಿಸಿದರು.
ವಿಶ್ವ ಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಅಕ್ಟೋಬರ್ 29ರಂದು ಮಟಮಾರಿಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪಾರ್ಶ್ವವಾಯು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಈ ಕಾಯಿಲೆಯ ಕುರಿತು ಅರಿವು ಮೂಡಿಸುವುದು ಹಾಗೂ ತುರ್ತು ಚಿಕಿತ್ಸೆಯ ಮಹತ್ವವನ್ನು ತಿಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಪಾರ್ಶ್ವವಾಯು ಮೆದುಳಿಗೆ ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟಾದಾಗ ಅಥವಾ ಮೆದುಳಿನ ರಕ್ತನಾಳ ಒಡೆದಾಗ ಸಂಭವಿಸುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ ಎಂದು ವಿವರಿಸಿದರು.
ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಗುರುತಿಸಲು 'ಬಿ ಫಾಸ್ಟ್' (BE FAST) ಸೂತ್ರವನ್ನು ಅನುಸರಿಸಬೇಕು. ಇದ್ದಕ್ಕಿದ್ದಂತೆ ದೇಹದ ಸಮತೋಲನ ತಪ್ಪುವುದು (Balance), ದೃಷ್ಟಿ ಮಸುಕಾಗುವುದು ಅಥವಾ ಕಾಣಿಸದಿರುವುದು (Eyes), ಮುಖದ ಒಂದು ಭಾಗ ಬಾಗುವುದು (Face), ಕೈಗಳಲ್ಲಿ ದೌರ್ಬಲ್ಯ ಕಾಣಿಸಿಕೊಳ್ಳುವುದು (Arms), ಮಾತು ತೊದಲುವುದು ಅಥವಾ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗದಿರುವುದು (Speech) ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದ ತಕ್ಷಣ ಸಮಯ ವ್ಯರ್ಥ ಮಾಡದೆ (Time) ತುರ್ತು ವೈದ್ಯಕೀಯ ಸೇವೆ ಪಡೆಯಬೇಕು ಎಂದು ಸಲಹೆ ನೀಡಿದರು.
ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ರಕ್ತದಲ್ಲಿನ ಕೊಬ್ಬಿನಂಶ ಹೆಚ್ಚಾಗಿರುವುದು ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ನಿಯಮಿತ ಆರೋಗ್ಯ ತಪಾಸಣೆ, ಸಮತೋಲಿತ ಆಹಾರ ಸೇವನೆ, ದೈಹಿಕ ವ್ಯಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಪಾರ್ಶ್ವವಾಯುವಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರಿಂದ ಗಂಭೀರ ಪರಿಣಾಮಗಳನ್ನು ತಗ್ಗಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಸುವರ್ಣ ಬೆಳಗಾವಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಧೂಮಪಾನ, ಮದ್ಯಪಾನದಂತಹ ದುಶ್ಚಟಗಳಿಂದ ದೂರವಿದ್ದು, ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ ಹಾಗೂ ನಿಯಮಿತ ಆರೋಗ್ಯ ತಪಾಸಣೆಗೆ ಆದ್ಯತೆ ನೀಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮಾನವ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಬದುಕಿನ ಪ್ರತಿಯೊಂದು ಕ್ಷಣವನ್ನೂ ಅರ್ಥಪೂರ್ಣವಾಗಿ ಕಳೆಯಲು ಉತ್ತಮ ಆರೋಗ್ಯ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಕುಟುಂಬದ ಸದಸ್ಯರು ಹಾಗೂ ಸಾರ್ವಜನಿಕರಲ್ಲಿಯೂ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿಜಯಲಕ್ಷ್ಮೀ, ಕಾಲೇಜಿನ ಉಪನ್ಯಾಸಕರಾದ ವೀರೇಂದ್ರ, ಶಿವರಾಜ್, ಬಸವರಾಜ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



