ಕವಿತಾಳ, ಅ. 30- ರೈತರ ಪಂಪ್ ಸೆಟ್ ಗಳಿಗೆ ರಾತ್ರಿ ಸಮಯದಲ್ಲಿ ನೀಡುತ್ತಿರುವ ವಿದ್ಯುತ್ ಪೂರೈಕೆ ಸಮಯ ಬದಲಾವಣೆ ಮಾಡಿ ಹಗಲಿನಲ್ಲಿ ಪೂರೈಕೆ ಮಾಡಿ ಎಂದು ಆಗ್ರಹಿಸಿ ಪಟ್ಟಣದ ಜೆಸ್ಕಾಂ ಕಚೇರಿ ಮುಂದೆ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಬರಗಾಲ ಪರಿಸ್ಥಿತಿ ಉಂಟಾಗಿರುವುದರಿಂದ ಇದ್ದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಇದ್ದ ನೀರನ್ನು ಬಳಸಿಕೊಳ್ಳಲು ರಾತ್ರಿ ಸಮಯದಲ್ಲಿ ವಿದ್ಯುತ್ ನೀಡುತ್ತಿರುವುದರಿಂದ ಸರಿಯಾಗಿ ನೀರು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆವರೆಗೂ ವಿದ್ಯುತ್ ಪೂರೈಕೆ ಆಗುತ್ತಿರುವುದರಿಂದ ರಾತ್ರಿ ಸಮಯದಲ್ಲಿ ಸೊಳ್ಳೆಗಳ ಕಾಟ ಹಾಗೂ ವಿಷ ಜಂತುಗಳ ಹಾವಳಿಗೆ ಭಯಭೀತಿಯಿಂದ ರೈತರು ನೀರು ಹಾಯಿಸುವಂತಾಗಿದೆ.

ಇತ್ತೀಚೆಗೆ ರಾತ್ರಿ ಸಮಯದಲ್ಲಿ ವಿಷ ಜಂತುಗಳ ಕಚ್ಚುವಿಕೆಯಿಂದ ಹಲವಾರು ಪ್ರಕರಣಗಳು ಜರುಗಿದ್ದು, ರೈತರು ಆತಂಕ ಕೊಳಗಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಹಗಲಿನಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ 7 ತಾಸು ವಿದ್ಯುತ್ ಪೂರೈಕೆ ಮಾಡಬೇಕೆಂದು ರೈತ ಮೌನೇಶ್ ಹಿರೇಕುರುಬರ್ ಒತ್ತಾಯಿಸಿದರು.

ಪ.ಪಂ. ಮಾಜಿ ಸದಸ್ಯ ಗಂಗಪ್ಪ ದಿನ್ನಿ ಜೆಸ್ಕಾಂ ಎಇಇ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರೈತರ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಮತ್ತು ಹಗಲಿನಲ್ಲಿ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು. ಜೆಸ್ಕಾಂ ಇಲಾಖೆ ಅಧಿಕಾರಿ ಜೆ ಇ ಜಲಾಲಿ ಮಾತನಾಡಿ, ಇನ್ನು ಮೂರು ದಿನದಲ್ಲಿ ಸಮಸ್ಯೆಯನ್ನು ಸರಿಪಡಿಸಿ ಹಗಲು ವೇಳೆ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳ ಭರವಸೆ ಮೇರೆಗೆ ರೈತರು ಪ್ರತಿಭಟನೆ ಕೈಬಿಟ್ಟರು. ಒಂದು ವೇಳೆ ಮೂರು ದಿನದಲ್ಲಿ ಸಮಸ್ಯೆ ಸರಿಪಡಿಸದಿದ್ದರೆ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ, ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಾದ ರಫಿ ಒಂಟಿಬಂಡಿ, ರಾಜಾಸಾಬ್ ಮುಲ್ಲ, ಶಾಲಂ, ಮುಸ್ತಫಾ ಒಂಟಿಬಂಡಿ, ಮೌಲಸಾಬ್, ಸೈಯದ್, ಹಾಜಿ ಬಾಬು, ಮಾಳಪ್ಪ ಯಾದವ, ಗಂಗಪ್ಪ ಚಲುವಾದಿ, ಕರಿಯಪ್ಪ ಕಬ್ಬೆರ, ರಾಜಾಸಾಬ್ ಚಿಂಚರಕಿ, ಆದಪ್ಪ ಹೀರಾ, ಖಾಜಾ ಬುಡ್ಡ ಕುಂಟಲ್ಲಿ, ರಂಗಪ್ಪ ಸೇರಿದಂತೆ ಇನ್ನಿತರ ರೈತರು ಹಾಜರಿದ್ದರು.