ಜಾಲಹಳ್ಳಿ: ಶ್ರೀ ಲಕ್ಷ್ಮೀ ರಂಗನಾಥ ಗೋವಿಂದ ಸೇವಾ ಸಮಿತಿ ಹಾಗೂ ಜಾಲಹಳ್ಳಿ ಸದ್ಭಕ್ತ ಮಂಡಳಿ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮುಖ್ಯ ಪ್ರಾಣ ಮೆಲೋಡೀಸ್ ಆರ್ಕೆಸ್ಟ್ರಾ ತಂಡದ ಸಂಗೀತ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯಿತು.

ಸಂಭ್ರಮದಿಂದ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಂಗೀತದ ಮೆರುಗು ನೀಡುವ ಉದ್ದೇಶದಿಂದ ಜಾಲಹಳ್ಳಿಯ ಮುಖ್ಯ ಪ್ರಾಣ ಮೆಲೋಡೀಸ್ ತಂಡದ ವತಿಯಿಂದ ವಿಶೇಷ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನರಸಿಂಹ ನಾಯಕ ಹಾಗೂ ಅಮರೇಶ ಬಿ.ಆರ್. ಗುಂಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಪ್ರಕಾರದ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ಮೆಲೋಡಿ ಸ್ಟಾರ್ ಸುಷ್ಮಾ ಹಾಗೂ ಶೈನಿಂಗ್ ಸ್ಟಾರ್ ಲತಾ ಅವರು ಭಕ್ತಿಗೀತೆಗಳು, ಚಲನಚಿತ್ರ ಗೀತೆಗಳು, ಜನಪದ ಗೀತೆಗಳು ಮತ್ತು ಭಾವಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರ ಮನಗೆದ್ದರು. ಅವರ ಸುಮಧುರ ಗಾಯನಕ್ಕೆ ನೆರೆದಿದ್ದ ಸಂಗೀತಾಸಕ್ತರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗಾಯಕರಾದ ಆಂಜನೇಯ್ಯ ಪೊಲೀಸ್ ಪಾಟೀಲ್, ಜಾನಪದ ಗಾಯಕ ಮಂಜು ಗುಮೇದಾರ್, ಅಮರೇಶ ಬಿ.ಆರ್. ಗುಂಡ ಹಾಗೂ ಚಂದ್ರು ಕೆ. ಸೋಮನಮರಡಿ ಅವರು ವಿವಿಧ ಗೀತೆಗಳನ್ನು ಹಾಡಿ ಸಂಗೀತ ರಸದೌತಣ ಉಣಬಡಿಸಿದರು. ವಿಶೇಷವಾಗಿ ರೈತ ಗೀತೆಗಳು ಹಾಗೂ ಜನಪದ ಗೀತೆಗಳ ಗಾಯನ ಪ್ರೇಕ್ಷಕರಲ್ಲಿ ಉತ್ಸಾಹ ಮೂಡಿಸಿತು.

ಸಾಮೂಹಿಕ ವಿವಾಹದ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸಂಗೀತ ಕಾರ್ಯಕ್ರಮವೂ ನಡೆದಿದ್ದು, ಸಮಾರಂಭಕ್ಕೆ ವಿಶೇಷ ಕಳೆ ತಂದಿತು. ನೂತನ ವಧು-ವರರಿಗೆ ಹಿರಿಯರು ಆಶೀರ್ವದಿಸಿ, ಅವರ ದಾಂಪತ್ಯ ಜೀವನ ಸುಖ, ಶಾಂತಿ ಹಾಗೂ ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಶ್ರೀ ಲಕ್ಷ್ಮೀ ರಂಗನಾಥ ಗೋವಿಂದ ಸೇವಾ ಸಮಿತಿ ಹಾಗೂ ಸದ್ಭಕ್ತ ಮಂಡಳಿಯ ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಾರ್ವಜನಿಕರು ಮತ್ತು ಸಂಗೀತಾಭಿಮಾನಿಗಳು ಭಾಗವಹಿಸಿದ್ದರು.