ಜಾಲಹಳ್ಳಿ: ಮಕ್ಕಳಿಗೆ ಶೈಕ್ಷಣಿಕ ಜ್ಞಾನ ನೀಡುವುದರ ಜತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬೋಧಿಸುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ. ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಸಮೀಪದ ಲಿಂಗದಹಳ್ಳಿ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಮಕ್ಕಳಲ್ಲಿ ಬಾಲ್ಯದಿಂದಲೇ ಧಾರ್ಮಿಕ ಪ್ರಜ್ಞೆ, ಮಾನವೀಯತೆ ಹಾಗೂ ಸನ್ನಡತೆಯನ್ನು ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.

ಇಷ್ಟಲಿಂಗ ಪೂಜೆ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗಿಲ್ಲ. ಅದು ಮನುಷ್ಯನ ಅಂತರಂಗದಲ್ಲಿರುವ ದೈವತ್ವವನ್ನು ಅರಿಯುವ ಸಾಧನವಾಗಿದೆ. ಮನಸ್ಸಿನ ಶುದ್ಧತೆ, ಏಕಾಗ್ರತೆ ಹಾಗೂ ಆಧ್ಯಾತ್ಮಿಕ ಚಿಂತನೆಗೆ ಇಷ್ಟಲಿಂಗ ಪೂಜೆ ಸಹಕಾರಿಯಾಗುತ್ತದೆ. ವೀರಶೈವ ಲಿಂಗಾಯತ ಧರ್ಮದ ತತ್ವಗಳನ್ನು ಅರಿತು ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಇಷ್ಟಲಿಂಗ ಪೂಜೆಗೆ ಮಹತ್ವ ನೀಡಬೇಕು ಎಂದು ಕರೆ ನೀಡಿದರು.

ಲಿಂಗದಹಳ್ಳಿಯ ಶ್ರೀ ಪರಮಾನಂದ ದೇವಸ್ಥಾನವು ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಭಕ್ತರ ನಂಬಿಕೆ ಮತ್ತು ಶ್ರದ್ಧೆಯ ಕೇಂದ್ರವಾಗಿದೆ. ಶಿವಪಾರ್ವತಿಯರ ಸಾನ್ನಿಧ್ಯವಿರುವ ಈ ಕ್ಷೇತ್ರವು ಮುಂದಿನ ದಿನಗಳಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ದೇವಾಪುರದ ಶ್ರೀಗಳು ಸತತ ಒಂಬತ್ತು ದಿನಗಳ ಕಾಲ ಮೌನವ್ರತ ಆಚರಿಸಿ ಕಠಿಣ ತಪಸ್ಸಿನಲ್ಲಿ ತೊಡಗಿರುವುದು ವಿಶೇಷವಾಗಿದೆ. ಅವರ ತಪಸ್ಸು ಹಾಗೂ ಧಾರ್ಮಿಕ ಕಾರ್ಯಗಳಿಗೆ ಗ್ರಾಮಸ್ಥರು ಒಗ್ಗಟ್ಟಿನಿಂದ ಸಹಕಾರ ನೀಡಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಜನರಲ್ಲಿ ಭಕ್ತಿಭಾವ, ಪರಸ್ಪರ ಪ್ರೀತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ವೃದ್ಧಿಸಲು ನೆರವಾಗುತ್ತವೆ ಎಂದು ಹೇಳಿದರು.

ಧರ್ಮಸಭೆಯಲ್ಲಿ ಮಾತನಾಡಿದ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು, ಲಿಂಗದಹಳ್ಳಿ ಬೆಟ್ಟವು ಸುಮಾರು 68 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಆಧ್ಯಾತ್ಮಿಕ ಮಹತ್ವ ಹೊಂದಿರುವ ಪುಣ್ಯಕ್ಷೇತ್ರವಾಗಿದೆ. ಇಂತಹ ಪವಿತ್ರ ಸ್ಥಳಕ್ಕೆ ಕಾಶಿ ಜಗದ್ಗುರುಗಳು ಆಗಮಿಸಿ ಆಶೀರ್ವಚನ ನೀಡಿರುವುದು ಈ ಭಾಗದ ಭಕ್ತರಿಗೆ ವಿಶೇಷ ಸಂತಸ ತಂದಿದೆ ಎಂದರು.

ಜಗದ್ಗುರುಗಳ ಆಗಮನದಿಂದ ಲಿಂಗದಹಳ್ಳಿ, ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮತ್ತು ಆಧ್ಯಾತ್ಮಿಕ ಚಿಂತನೆಗೆ ಮತ್ತಷ್ಟು ಪ್ರೇರಣೆ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.

ಗುರುವಾರ ಸಂಜೆ ಲಿಂಗದಹಳ್ಳಿ ಗ್ರಾಮಕ್ಕೆ ಆಗಮಿಸಿದ ಕಾಶಿ ಜಗದ್ಗುರುಗಳನ್ನು ಗ್ರಾಮಸ್ಥರು ಭವ್ಯವಾಗಿ ಸ್ವಾಗತಿಸಿದರು. ನೂರಾರು ಸುಮಂಗಲಿಯರು ಕುಂಭಕಳಸ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಜಗದ್ಗುರುಗಳನ್ನು ಸಾರೋಟಿನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಭಕ್ತರ ಜಯಘೋಷ ಹಾಗೂ ಧಾರ್ಮಿಕ ಸಂಭ್ರಮದ ನಡುವೆ ನಡೆದ ಸ್ವಾಗತ ಕಾರ್ಯಕ್ರಮ ಗಮನ ಸೆಳೆಯಿತು.

ಬಳಿಕ ಇಷ್ಟಲಿಂಗ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ ಧರ್ಮಸಭೆ ನೆರವೇರಿದವು. ಎರಡು ದಿನಗಳ ಕಾಲ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿದ್ದರು.

ಶ್ರೀ ಲಿಂಗದಹಳ್ಳಿ ಪರಮಾನಂದ ದೇವಸ್ಥಾನದ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಮಹಾಂತಯ್ಯ ಸ್ವಾಮಿ ಹಾಗೂ ಟ್ರಸ್ಟ್‌ನ ಸರ್ವಸದಸ್ಯರ ನೇತೃತ್ವದಲ್ಲಿ ಲಿಂಗದಹಳ್ಳಿ ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ದೇವಾಪುರದ ಶಿವಮೂರ್ತಿ ಸ್ವಾಮೀಜಿ, ಗಬ್ಬೂರಿನ ಬೂದಿಬಸವ ಸ್ವಾಮೀಜಿ, ಗುಂಡಕ್ಕನ್ನಾಳದ ಗುರುಲಿಂಗ ಸ್ವಾಮೀಜಿ, ಸುಲ್ತಾನಪುರದ ಶಂಭು ಸೋಮನಾಥ ಸ್ವಾಮೀಜಿ, ಮುಖಂಡರಾದ ಮಹಾಂತಯ್ಯ ಸ್ವಾಮಿ ಲಿಂಗದಹಳ್ಳಿ, ಸಂಜೀವರಡ್ಡಿ ಸಾಹುಕಾರ, ವೆಂಕಟರಾವ್ ಬೆನಕನ, ವೆಂಕನಗೌಡ ನವಿಲುಗುಡ್ಡ, ವೀರಣ್ಣ ಪಾಣಿ ಸಾಹು, ಹನುಮಂತಿ ಶಿವಬಸಪ್ಪ ರಾಂಪಳ್ಳಿ, ಯಲ್ಲಮ್ಮ ಮಲ್ಲಪ್ಪ ಗಣಜಲಿ ಸೇರಿದಂತೆ ಅನೇಕ ಗಣ್ಯರು, ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.