ಹಟ್ಟಿ ಚಿನ್ನದ ಗಣಿ: 2026–27ನೇ ಸಾಲಿನ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (SGFI) ವತಿಯಿಂದ ಆಯೋಜಿಸಿದ್ದ 14 ವರ್ಷದೊಳಗಿನ ಬಾಲಕರ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಲಿಂಗಸುಗೂರು ತಾಲೂಕಿನ ವಿದ್ಯಾರ್ಥಿ ಆರ್ಯನ್ ಗೌತಮ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಉರಿಗಾಂಪೇಟೆಯ ಜಿಐವಿಟಿ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಕಲಬುರಗಿ ವಿಭಾಗವನ್ನು ಪ್ರತಿನಿಧಿಸಿದ್ದ ಆರ್ಯನ್ ಗೌತಮ್, ತಂಡದ ಪ್ರಥಮ ಸ್ಥಾನದ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಕೌಶಲ್ಯ ಪ್ರದರ್ಶಿಸಿ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.
ಲಿಂಗಸುಗೂರು ಪಟ್ಟಣದ ಆದರ್ಶ ವಿದ್ಯಾಲಯ (ಆರ್ಎಂಎಸ್ಎ)ದಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಯನ್ ಗೌತಮ್, ಶಿಕ್ಷಕ ಲಕ್ಷ್ಮಣ ಗೌಡೂರು ಅವರ ಪುತ್ರರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ನಿರಂತರ ಅಭ್ಯಾಸ ಹಾಗೂ ಪರಿಶ್ರಮದ ಮೂಲಕ ರಾಜ್ಯಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಗೆ ಆದರ್ಶ ವಿದ್ಯಾಲಯದ ಮುಖ್ಯಸ್ಥರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಾಲೆ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸುವಂತೆ ಶುಭ ಹಾರೈಸಿದ್ದಾರೆ.
ಆರ್ಯನ್ ಗೌತಮ್ ಅವರಿಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ತರಬೇತಿ ನೀಡುತ್ತಿರುವ ರೈಸಿಂಗ್ ಸ್ಟಾರ್ ಕ್ರಿಕೆಟ್ ಅಕಾಡೆಮಿಯ ಸಂಸ್ಥಾಪಕ ಹಾಗೂ ತರಬೇತುದಾರ ಕಾರ್ತಿಕ್ ನಾಯಕ ಅವರು ವಿದ್ಯಾರ್ಥಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರ್ಯನ್ ಅವರ ಶಿಸ್ತು, ಪರಿಶ್ರಮ ಮತ್ತು ಕ್ರೀಡೆಯ ಮೇಲಿನ ಆಸಕ್ತಿ ಈ ಸಾಧನೆಗೆ ಕಾರಣವಾಗಿದ್ದು, ಮುಂದಿನ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಲಿಂಗಸುಗೂರು ತಾಲೂಕು ಹಾಗೂ ರಾಯಚೂರು ಜಿಲ್ಲೆಗೆ ಹೆಮ್ಮೆ ತರಲಿ ಎಂದು ಆಶಿಸಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಸ್ಥಳೀಯ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ.



