ರಾಯಚೂರು: ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಕೊಡುಗೆ ಹಾಗೂ ನಾಡಿನ ಐತಿಹಾಸಿಕ ಗತವೈಭವದ ಕುರಿತು ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಚನ್ನಪ್ಪ ಕೆಎಎಸ್ ಹೇಳಿದರು.
ನಗರದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಹರಡಿಕೊಂಡಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಏಕೀಕೃತ ಕರ್ನಾಟಕವನ್ನು ರೂಪಿಸಿದ ನವೆಂಬರ್ 1 ಕನ್ನಡಿಗರ ಪಾಲಿಗೆ ಐತಿಹಾಸಿಕ ದಿನವಾಗಿದೆ. ಕನ್ನಡ ನಾಡಿನ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರು 1905ರಲ್ಲಿ ಚಳವಳಿಗೆ ಚಾಲನೆ ನೀಡಿ, ಕನ್ನಡಿಗರಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಲು ಶ್ರಮಿಸಿದರು. ತಮ್ಮ ‘ಕರ್ನಾಟಕ ಗತವೈಭವ’ ಕೃತಿಯ ಮೂಲಕ ನಾಡಿನ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯ ಕುರಿತು ಜನಜಾಗೃತಿ ಮೂಡಿಸಿದರು ಎಂದು ಸ್ಮರಿಸಿದರು.
1956ರ ನವೆಂಬರ್ 1ರಂದು ಮುಂಬೈ, ಮದ್ರಾಸ್, ಹೈದರಾಬಾದ್ ಹಾಗೂ ಕೊಡಗು ಪ್ರಾಂತ್ಯಗಳ ಕನ್ನಡ ಭಾಷಿಕ ಪ್ರದೇಶಗಳನ್ನು ಮೈಸೂರು ರಾಜ್ಯದೊಂದಿಗೆ ವಿಲೀನಗೊಳಿಸುವ ಮೂಲಕ ವಿಶಾಲ ಮೈಸೂರು ರಾಜ್ಯವನ್ನು ರಚಿಸಲಾಯಿತು. ಈ ಐತಿಹಾಸಿಕ ಏಕೀಕರಣವು ಕನ್ನಡಿಗರ ದೀರ್ಘಕಾಲದ ಹೋರಾಟ ಮತ್ತು ಒಗ್ಗಟ್ಟಿನ ಫಲವಾಗಿದೆ ಎಂದು ತಿಳಿಸಿದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸದ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಕನ್ನಡ ಭಾಷೆಯ ಬಳಕೆಯನ್ನು ಹೆಚ್ಚಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಜೀಶಾನ್ ಅಖಿಲ್ ಸಿದ್ದಿಖಿ ಮಾತನಾಡಿ, ಕನ್ನಡತನ, ಕನ್ನಡ ಹಬ್ಬ ಹಾಗೂ ಕನ್ನಡ ಅಸ್ಮಿತೆಗೆ ಪ್ರತಿವರ್ಷ ಹೊಸ ಆಯಾಮಗಳು ಸೇರ್ಪಡೆಯಾಗುತ್ತಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಶಿಷ್ಟ್ಯವನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವಜನರು ಕನ್ನಡದ ಮೇಲಿನ ಅಭಿಮಾನವನ್ನು ಬೆಳೆಸಿಕೊಂಡು ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವೆ (ಮೌಲ್ಯಮಾಪನ) ಪ್ರೊ. ಜ್ಯೋತಿ ಧಮ್ಮ ಪ್ರಕಾಶ್, ಸಿಂಡಿಕೇಟ್ ಸದಸ್ಯರಾದ ಶ್ರೇಯಾಂಕ್ ಎಚ್.ವಿ., ಡಿ.ಆರ್. ಚಿನ್ನ, ಶಿವಣ್ಣ, ವಾಣಿಜ್ಯ ನಿಕಾಯದ ಡೀನ್ ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ. ಪಿ. ಭಾಸ್ಕರ್, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಸುಯಮೀಂದ್ರ ಕುಲಕರ್ಣಿ, ಎನ್ಎಸ್ಎಸ್ ಸಂಯೋಜಕ ಡಾ. ಜಿ.ಎಸ್. ಬಿರಾದಾರ ಉಪಸ್ಥಿತರಿದ್ದರು.
ಕ್ರೀಡಾ ವಿಭಾಗದ ಸಂಯೋಜಕ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ವಿಭಾಗಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡ ವಿಭಾಗದ ಅತಿಥಿ ಉಪನ್ಯಾಸಕಿ ಡಾ. ಶಿವಲೀಲಾ ಬಸನಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



