ರಾಯಚೂರು: ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ರಫೀಕ್ ಅಹಮದ್ ಕರೆ ನೀಡಿದರು.
ನಗರದ ಶಕ್ತಿನಗರದ ಒಂದನೇ ಕ್ರಾಸ್ನ ರಾಷ್ಟ್ರಕೂಟ ವೃತ್ತದಲ್ಲಿ ಭಾನುವಾರ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ, ಕನ್ನಡ ಮಿತ್ರಕೂಟ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ ಮತ್ತು ಅಸ್ಮಿತೆಯ ಸಂಕೇತವಾಗಿದೆ. ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಮಾತನಾಡುವ ಮೂಲಕ ಅದರ ಬಳಕೆಯನ್ನು ಹೆಚ್ಚಿಸಬೇಕು. ಕನ್ನಡದ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಎಲ್ಲ ಕನ್ನಡಪರ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕನ್ನಡ ಮಿತ್ರಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ. ಅವರು ಕನ್ನಡಾಂಬೆ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ರಫೀಕ್ ಅಹಮದ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಕನ್ನಡಾಭಿಮಾನಿಗಳು ನಾಡಗೀತೆ ಹಾಡಿ, ಕನ್ನಡಾಂಬೆಯ ಜಯಘೋಷ ಮೊಳಗಿಸಿದರು.
ಕನ್ನಡ ಮಿತ್ರಕೂಟದ ಅಧ್ಯಕ್ಷ ಅಶೋಕ್ ಕುಮಾರ್ ಸಿ.ಕೆ. ಮಾತನಾಡಿ, ‘ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ’ ಎಂಬ ಕವಿವಾಣಿಯಂತೆ ಪ್ರತಿಯೊಬ್ಬರೂ ಕನ್ನಡದ ಸೇವೆಗೆ ಮುಂದಾಗಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡವು ಕರ್ನಾಟಕದಲ್ಲಿ ಆಡಳಿತ ಮತ್ತು ದೈನಂದಿನ ವ್ಯವಹಾರಗಳ ಪ್ರಮುಖ ಭಾಷೆಯಾಗಿ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮೂರು ಸಂಘಟನೆಗಳ ಒಟ್ಟು 32 ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಪದಾಧಿಕಾರಿಗಳು, ಬಶೀರ್ ಅಹಮದ್ ಹೊಸಮನಿ, ರಾಮಣ್ಣ ಮಾದಾರ್, ಚಂದ್ರಶೇಖರ್ ಪಾಟೀಲ, ನಿಜಾಮುದ್ದೀನ್, ಲಕ್ಷ್ಮಣ್ ಕುಮಾರ್, ಮಲ್ಲಿಕಾರ್ಜುನ ನಡುಮನೆ, ಮಲ್ಲಿಕಾರ್ಜುನ ವಿಭೂತಿ, ಕೆ. ವೀರೇಶ್ ಬಾಬು, ಮಹೇಂದ್ರ ಸಿಂಗ್, ವೆಂಕಯ್ಯ ಶೆಟ್ಟಿ, ಕ್ಷೀರಲಿಂಗಪ್ಪ, ರುದ್ರಯ್ಯ ಗುನಾರಿ, ಸಿದ್ದಯ್ಯ ಶಕ್ತಿನಗರ, ಕಾಂತ ಹಡಗಲಿ, ಅಜೀಜ್, ರಾಘವೇಂದ್ರ, ಪಿ. ಚಂದ್ರಶೇಖರ್, ವೆಂಕಟರೆಡ್ಡಿ ದಿನ್ನಿ, ಸಿದ್ದರಾಮಪ್ಪ ಮಾಲಿಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



