ರಾಯಚೂರು: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ. ನಾಗರಾಜ ಹೇಳಿದರು.
ಜನತಾ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವೆಂಬರ್ 1 ಕನ್ನಡಿಗರ ಪಾಲಿಗೆ ಐತಿಹಾಸಿಕ ಹಾಗೂ ಹೆಮ್ಮೆಯ ದಿನವಾಗಿದೆ. 1956ರ ನವೆಂಬರ್ 1ರಂದು ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು. ನಂತರ 1973ರ ನವೆಂಬರ್ 1ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈ ದಿನವು ನಾಡಿನ ಏಕತೆ, ಸಂಸ್ಕೃತಿ ಹಾಗೂ ಭಾಷಾಭಿಮಾನವನ್ನು ಸಾರುತ್ತದೆ ಎಂದು ತಿಳಿಸಿದರು.
ಪಂಪ, ರನ್ನ, ಜನ್ನರಿಂದ ಹಿಡಿದು ಕುವೆಂಪು, ಬೇಂದ್ರೆಯವರೆಗೆ ಅನೇಕ ಮಹಾನ್ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ. ಕುವೆಂಪು ಅವರ ಆಶಯದಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಎಲ್ಲರೂ ಜಾತಿ, ಧರ್ಮದ ಭೇದವಿಲ್ಲದೆ ಸಹೋದರತ್ವದಿಂದ ಬದುಕಬೇಕು ಎಂದರು.
ಆಧುನಿಕ ಯುಗದಲ್ಲಿ ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳನ್ನು ಕಲಿಯುವುದು ಅಗತ್ಯ. ಆದರೆ ಮಾತೃಭಾಷೆ ಕನ್ನಡವನ್ನು ಮರೆಯಬಾರದು. ವಿದ್ಯಾರ್ಥಿಗಳು ಮನೆಯಲ್ಲಿ, ಶಾಲೆಯಲ್ಲಿ ಹಾಗೂ ದೈನಂದಿನ ಜೀವನದಲ್ಲಿ ಕನ್ನಡ ಬಳಸುವುದರೊಂದಿಗೆ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕನ್ನಡ ರಾಜ್ಯೋತ್ಸವವು ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿದಿನ ಕನ್ನಡ ಭಾಷೆಯನ್ನು ಬಳಸುವ ಸಂಕಲ್ಪವಾಗಬೇಕು. ಯುವಪೀಳಿಗೆಯಲ್ಲಿ ಕನ್ನಡಾಭಿಮಾನ ಬೆಳೆಸುವ ಮೂಲಕ ನಾಡಿನ ಕಲೆ, ಸಾಹಿತ್ಯ ಹಾಗೂ ಜಾನಪದ ಪರಂಪರೆಯನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಸುಮಲತಾ ಬಿ., ಸಹಶಿಕ್ಷಕಿ ಸಂಗಮೇಶ್ವರಿ, ಎಸ್ಡಿಎಂಸಿ ಅಧ್ಯಕ್ಷೆ ಚಂದ್ರಕಲಾ ನಾಗರಾಜ, ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಕೆ. ನಾಗರಾಜ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.



