ನಂದವಾಡಗಿ: ಬಾಗಲಕೋಟೆ ಜಿಲ್ಲೆಯ ಹುನಗುಂದ–ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಭಾನುವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಆವರಣವನ್ನು ಕನ್ನಡ ಬಾವುಟಗಳಿಂದ ಅಲಂಕರಿಸಲಾಗಿದ್ದು, ಎಲ್ಲೆಡೆ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಸಂಭ್ರಮ ಮನೆಮಾಡಿತ್ತು. ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಕವಿವಾಣಿಯ ಆಶಯದೊಂದಿಗೆ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಎಸ್.ಎಚ್. ಹಿರೇಕುಂಬಿ ಅವರು ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆಯು ಶ್ರೀಮಂತ ಇತಿಹಾಸ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಯುವಪೀಳಿಗೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಶಿಕ್ಷಕಿ ವಿ.ಬಿ. ಕುಂಬಾರ ಹಾಗೂ ಅಶ್ವಿನಿ ಕಪ್ಪರದ ಮಾತನಾಡಿ, ಕನ್ನಡ ನಾಡಿನ ಸಾಂಸ್ಕೃತಿಕ ವೈಭವ, ಭಾಷೆಯ ಹಿರಿಮೆ ಹಾಗೂ ಕನ್ನಡ ರಾಜ್ಯೋತ್ಸವದ ಐತಿಹಾಸಿಕ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿನಿಯರು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು, ದೈನಂದಿನ ಜೀವನದಲ್ಲಿ ಕನ್ನಡದ ಬಳಕೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕನ್ನಡ ರಾಜ್ಯೋತ್ಸವದ ಕುರಿತು ಭಾಷಣ ಮಾಡಿದರು. ಕನ್ನಡದ ಪ್ರಸಿದ್ಧ ಕವಿಗಳು ರಚಿಸಿದ ಗೀತೆಗಳಿಗೆ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಕನ್ನಡ ಗೀತೆಗಳ ಗಾಯನ, ಪ್ರಾರ್ಥನೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಈ ಸಂದರ್ಭದಲ್ಲಿ ಜಿ.ಆರ್. ನದಾಫ್, ಜ್ಯೋತಿ, ವಿ.ಬಿ. ಕುಂಬಾರ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಚಂದ್ರಶೇಖರ ಹುತಗಣ್ಣ, ಅಶ್ವಿನಿ ಕಪ್ಪರದ, ಶಾಲಾ ವಿದ್ಯಾರ್ಥಿ ಸಂಸತ್ತಿನ ಪ್ರಧಾನಮಂತ್ರಿ ಅರ್ಚನಾ ಹೂಲಗೇರಿ, ಉಪ ಪ್ರಧಾನಮಂತ್ರಿ ಯಮನಮ್ಮ ಫಲದಿನ್ನಿ, ಸಚಿವ ಸಂಪುಟದ ಸದಸ್ಯರು, ಅಮರೇಶ ಗಾಣಿಗೇರ, ಬಿಸಿಯೂಟ ಸಿಬ್ಬಂದಿ, ಹಿರಿಯ ವಿದ್ಯಾರ್ಥಿನಿಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಬಸವರಾಜ ಬಲಕುಂದಿ ಕಾರ್ಯಕ್ರಮ ನಿರೂಪಿಸಿದರು. ಡಾ. ವಿಶ್ವನಾಥ ತೋಟಿ ಸ್ವಾಗತಿಸಿದರು. ಚಂದ್ರಶೇಖರ ಹುತಗಣ್ಣ ವಂದಿಸಿದರು.

