ದೇವದುರ್ಗ, ನ. 1: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲೂಕು ಹಾಗೂ ನಗರ ಘಟಕಗಳ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು ಬೈಕ್ ರ್ಯಾಲಿ, ಕನ್ನಡ ಧ್ವಜಾರೋಹಣ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆಯೊಂದಿಗೆ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ರಾಜ್ಯೋತ್ಸವದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಪಟ್ಟಣದ ಜೈರುದ್ದೀನ್ ಪಾಶಾ ವೃತ್ತದಿಂದ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ಅಂಬೇಡ್ಕರ್ ವೃತ್ತದ ಮೂಲಕ ಪುರಸಭೆ ಕಚೇರಿ ಸಮೀಪದ ಧ್ವಜಸ್ತಂಭದವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದ ವಿಶೇಷವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ದೇವದುರ್ಗದಲ್ಲಿ ನೂತನ ನಗರ ವಿದ್ಯಾರ್ಥಿ ಘಟಕವನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ವಿದ್ಯಾರ್ಥಿ ಘಟಕದ ನಗರ ಅಧ್ಯಕ್ಷರಾಗಿ ಸಲ್ಮಾನ್, ಉಪಾಧ್ಯಕ್ಷರಾಗಿ ಬಾಬು ಎಂ., ಗೌರವಾಧ್ಯಕ್ಷರಾಗಿ ಹಸೇನ್, ಪ್ರಧಾನ ಕಾರ್ಯದರ್ಶಿಯಾಗಿ ಜೈರುದ್ದೀನ್, ಸಹ ಕಾರ್ಯದರ್ಶಿಗಳಾಗಿ ಬಸವರಾಜ ಹಾಗೂ ಎಂ.ಡಿ. ಮುಜಾಮಿಲ್, ಪ್ರಚಾರ ಸಮಿತಿ ಕಾರ್ಯದರ್ಶಿಯಾಗಿ ಜೈರುದ್ದೀನ್ ಅವರನ್ನು ನೇಮಕ ಮಾಡಲಾಯಿತು. ಸದಸ್ಯರಾಗಿ ಶಿವರಾಜ್ ನೀಲವಂಜಿ ಹಾಗೂ ಅಳವಳೆಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನೋಟ್ಬುಕ್ ಹಾಗೂ ಪೆನ್ನುಗಳನ್ನು ವಿತರಿಸುವ ಮೂಲಕ ಶೈಕ್ಷಣಿಕ ಪ್ರೋತ್ಸಾಹ ನೀಡಲಾಯಿತು. ಕನ್ನಡಾಭಿಮಾನ ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳನ್ನು ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ನೂತನ ವಿದ್ಯಾರ್ಥಿ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಬಸವರಾಜ ಗೋಪಾಳಪುರ, ಉಪಾಧ್ಯಕ್ಷ ಉಸ್ಮಾನ್ ಪಾಷಾ, ತಾಲೂಕು ಕಾರ್ಯಾಧ್ಯಕ್ಷ ಸುರೇಶ್ ಪಾಟೀಲ, ತಾಲೂಕು ಕಾರ್ಯದರ್ಶಿ ಅಮರೇಶ್ ಪಾಟೀಲ, ನಗರ ಘಟಕದ ಅಧ್ಯಕ್ಷ ಹುಸೇನ್ ಬಾಷಾ, ಉಪಾಧ್ಯಕ್ಷರಾದ ಉಸ್ಮಾನ್ ಬೂವಾಜಿ ಹಾಗೂ ಅಯ್ಯೂಬ್ ಖಾನ್, ಸದಸ್ಯರಾದ ಬಾಬು ಬೂವಾಜಿ, ಬಾಬು, ಆಸಿಫ್, ಹಸೇನ್, ಜೈರುದ್ದೀನ್ ಸೇರಿದಂತೆ ಸಂಘಟನೆಯ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಸಂದೇಶದೊಂದಿಗೆ ನಡೆದ ರಾಜ್ಯೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನೆರವೇರಿತು.



