ಜಾಲಹಳ್ಳಿ, ನ. 1: ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸದೆ, ಕೇವಲ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಚರಣೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಧ್ವಜಾರೋಹಣಕ್ಕೆ ಅವಕಾಶ ನೀಡದ ಅಧಿಕಾರಿಗಳ ಕ್ರಮವನ್ನು ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಸಹಕಾರ ಸಂಘದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸೂಚನೆಯಂತೆ ಸಂಘದ ಕಾರ್ಯದರ್ಶಿ ಶರಣು ಅವರು ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಖುರ್ಶಿದ್ ಪಟೇಲ್, ನಿರ್ದೇಶಕರಾದ ಈಶಣ್ಣ ಕಾಟಮಳ್ಳಿ, ವೆಂಕಣ್ಣ ಯರಕಮಟ್ಟಿ ಹಾಗೂ ನವೀನ್ ಪಾಟೀಲ್ ಉಪಸ್ಥಿತರಿದ್ದರು.
ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ನಂದಪ್ಪ ಪಿ. ಮಡ್ಡಿ ಹಾಗೂ ಜಾಲಹಳ್ಳಿ ಹೋಬಳಿ ಅಧ್ಯಕ್ಷ ತಮ್ಮಣ್ಣ ಹೆರುಂಡಿ ಒತ್ತಾಯಿಸಿದರು. ಆದರೆ, ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಂದ ಯಾವುದೇ ಆದೇಶ ಬಂದಿಲ್ಲ ಎಂದು ಸಂಘದ ಕಾರ್ಯದರ್ಶಿ ಶರಣು ಸ್ಪಷ್ಟಪಡಿಸಿದರು.
ಇದರಿಂದ ಅಸಮಾಧಾನಗೊಂಡ ಕರವೇ ಮುಖಂಡರು, ತಾಲೂಕು ವಿಸ್ತರಣಾಧಿಕಾರಿ ಅಮರೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧ್ವಜಾರೋಹಣಕ್ಕೆ ಅವಕಾಶ ನೀಡದಿರುವ ಕುರಿತು ಪ್ರಶ್ನಿಸಿದರು. ಈ ವೇಳೆ ಧ್ವಜಾರೋಹಣ ನಡೆಸಲು ಯಾವುದೇ ಆದೇಶ ಬಂದಿಲ್ಲ ಎಂದು ಅಮರೇಶ್ ತಿಳಿಸಿರುವುದಾಗಿ ಮುಖಂಡರು ಹೇಳಿದರು.
ಬಳಿಕ ಜಿಲ್ಲಾ ಉಪನಿಬಂಧಕ ಶೈಖ್ ಹುಸೇನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಜಿಲ್ಲೆಯ ಯಾವುದೇ ಪ್ರಾಥಮಿಕ ಸಹಕಾರ ಸಂಘಗಳಲ್ಲಿ ಧ್ವಜಾರೋಹಣ ನಡೆಸುವುದಿಲ್ಲ. ಕೇವಲ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜ್ಯೋತ್ಸವ ಆಚರಿಸಲಾಗುತ್ತದೆ ಎಂದು ತಿಳಿಸಿರುವುದಾಗಿ ಕರವೇ ಮುಖಂಡರು ಆರೋಪಿಸಿದರು.
ಕನ್ನಡ ನಾಡಿನ ಹೆಮ್ಮೆಯ ಹಬ್ಬವಾದ ರಾಜ್ಯೋತ್ಸವವನ್ನು ಧ್ವಜಾರೋಹಣವಿಲ್ಲದೆ ಆಚರಿಸಿರುವುದು ಕನ್ನಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಗೊಂದಲಗಳಿಗೆ ಅವಕಾಶ ನೀಡಬಾರದು ಎಂದು ಕರವೇ ಮುಖಂಡರು ಆಗ್ರಹಿಸಿದರು.
ಅಧಿಕಾರಿಗಳ ವಿರುದ್ಧ ದೂರು, ಜಿಲ್ಲಾದ್ಯಂತ ಹೋರಾಟದ ಎಚ್ಚರಿಕೆ
ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣಕ್ಕೆ ಅವಕಾಶ ನೀಡದಿರುವುದು ಖಂಡನೀಯ. ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳು ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನಂದಪ್ಪ ಪಿ. ಮಡ್ಡಿ ಹಾಗೂ ಜಾಲಹಳ್ಳಿ ಹೋಬಳಿ ಅಧ್ಯಕ್ಷ ತಮ್ಮಣ್ಣ ಹೆರುಂಡಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಧ್ವಜಾರೋಹಣಕ್ಕೆ ಅವಕಾಶ ನೀಡದ ಜಿಲ್ಲಾ ಉಪನಿಬಂಧಕ ಶೈಖ್ ಹುಸೇನ್ ಹಾಗೂ ತಾಲೂಕು ವಿಸ್ತರಣಾಧಿಕಾರಿ ಅಮರೇಶ್ ಅವರ ವಿರುದ್ಧ ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಬೇಕು. ಕನ್ನಡಿಗರ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.



