ರಾಯಚೂರು, ನ.2: ನಗರದ ಆಶಾಪೂರ ರಸ್ತೆಯ ಹೊರವಲಯದಲ್ಲಿರುವ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಶ್ರೀ ಏಳು ಮಕ್ಕಳ ತಾಯಾಂಭಿಕಾ ದೇವಸ್ಥಾನ ಹಾಗೂ ಪತಂಜಲಿ ಯೋಗ ಸಮಿತಿ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 25ರಿಂದ ನವೆಂಬರ್ 1ರವರೆಗೆ ಆಯೋಜಿಸಲಾಗಿದ್ದ ಎಂಟು ದಿನಗಳ ಉಚಿತ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಯಶಸ್ವಿಯಾಗಿ ಸಮಾಪನಗೊಂಡಿತು.

ಶ್ರೀ ಏಳು ಮಕ್ಕಳ ತಾಯಾಂಭಿಕಾ ದೇವಸ್ಥಾನ ಹಾಗೂ ಮಲ್ಲಿಕಾರ್ಜುನ ಬಡಾವಣೆ ಸಮಿತಿಯ ಅಧ್ಯಕ್ಷ ಮರೇಗೌಡ ಪಾಟೀಲ ಅವರ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪತಂಜಲಿ ಯೋಗ ಸಮಿತಿಯ ನಗರ ಸಂಚಾಲಕ ಪರಮೇಶ್ವರ ಸಾಲಿಮಠ ಹಾಗೂ ಜಿಲ್ಲಾ ಪ್ರಭಾರಿ ಕಿಶೋರ ಕುಮಾರ ಅವರು ಎಂಟು ದಿನಗಳ ಕಾಲ ಶಿಬಿರಾರ್ಥಿಗಳಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಗೆ ಸಂಬಂಧಿಸಿದ ಅಭ್ಯಾಸಗಳನ್ನು ಮಾಡಿಸಿದರು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮರೇಗೌಡ ಪಾಟೀಲ, ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ. ನಿತ್ಯದ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಯೋಗಾಭ್ಯಾಸಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕು. ಕಳೆದ ಎಂಟು ದಿನಗಳ ಯೋಗ ಶಿಬಿರದಿಂದ ಬಡಾವಣೆಯ ನಿವಾಸಿಗಳಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ಮೂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಯೋಗವು ಕೇವಲ ಶಿಬಿರಕ್ಕೆ ಸೀಮಿತವಾಗಬಾರದು. ಇಲ್ಲಿ ಕಲಿತ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿಯೂ ನಿರಂತರವಾಗಿ ಅಭ್ಯಾಸ ಮಾಡಬೇಕು. ಪಾಲಕರು ಉತ್ತಮ ಜೀವನಶೈಲಿ ಮತ್ತು ಸಂಸ್ಕಾರಗಳನ್ನು ಅಳವಡಿಸಿಕೊಂಡಾಗ ಮಕ್ಕಳು ಸಹ ಅವರನ್ನು ಅನುಸರಿಸುತ್ತಾರೆ. ಆರೋಗ್ಯವಂತ ಕುಟುಂಬ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಬಡಾವಣೆಯ ಅಭಿವೃದ್ಧಿಗೆ ನಿವಾಸಿಗಳ ಒಗ್ಗಟ್ಟು ಮತ್ತು ಸಹಕಾರ ಅತ್ಯಗತ್ಯವಾಗಿದೆ. ದೇವಸ್ಥಾನದ ಅಭಿವೃದ್ಧಿ, ಬಡಾವಣೆಯ ಮೂಲಸೌಕರ್ಯಗಳ ಸುಧಾರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಮುಂದಿನ ದಿನಗಳಲ್ಲಿಯೂ ಎಲ್ಲರೂ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಎಂಟು ದಿನಗಳ ಶಿಬಿರದ ಯಶಸ್ಸಿಗೆ ಶ್ರಮಿಸಿದ ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳು, ಪ್ರತಿದಿನ ಬೆಳಿಗ್ಗೆ ಯೋಗಾಭ್ಯಾಸಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಿದ ಸ್ವಯಂಸೇವಕರು, ಬಡಾವಣೆಯ ನಿವಾಸಿಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮರೇಗೌಡ ಪಾಟೀಲ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಏಳು ಮಕ್ಕಳ ತಾಯಾಂಭಿಕಾ ದೇವಸ್ಥಾನದ ಪದಾಧಿಕಾರಿಗಳು, ಮಲ್ಲಿಕಾರ್ಜುನ ಬಡಾವಣೆ ಸಮಿತಿಯ ಸದಸ್ಯರು, ನವದುರ್ಗೆಯರ ಸಮಿತಿಯ ಮಹಿಳಾ ಸದಸ್ಯರು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

ಶಿಬಿರದ ಸಮಾರೋಪದ ಅಂಗವಾಗಿ ಭಾಗವಹಿಸಿದ್ದ ಎಲ್ಲರಿಗೂ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.