ಲಿಂಗಸುಗೂರು, ನ.3: ರಾಜ್ಯದ ವಿವಿಧೆಡೆ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಹತ್ಯೆ ಹಾಗೂ ಕೊಲೆ ಯತ್ನದ ಘಟನೆಗಳನ್ನು ತೀವ್ರವಾಗಿ ಖಂಡಿಸಿ, ವಕೀಲರಿಗೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ ಸಮಗ್ರ ವಕೀಲರ ರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಲಿಂಗಸುಗೂರು ವಕೀಲರ ಸಂಘದ ವತಿಯಿಂದ ಮಂಗಳವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ಬೆಂಗಳೂರಿನ ವೈಟ್ಫೀಲ್ಡ್ನ ವಕೀಲ ಮಂಜುನಾಥ್ ಹಾಗೂ ಅನ್ನಪೂರ್ಣೇಶ್ವರಿ ನಗರದ ವಕೀಲ ಶ್ರೀರಾಮ್ ಅವರ ಹತ್ಯೆ ಮತ್ತು ಗೌರಿಬಿದನೂರಿನ ವಕೀಲ ವೆಂಕಟರಮಣ ಸನ್ನಕ್ಕಿ ಅವರ ಮೇಲಿನ ಕೊಲೆ ಯತ್ನದ ಘಟನೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಕೀಲರು, ಇಂತಹ ಘಟನೆಗಳು ಕಾನೂನು ವೃತ್ತಿಯಲ್ಲಿ ತೊಡಗಿರುವವರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.
ನ್ಯಾಯಾಂಗ ವ್ಯವಸ್ಥೆಯ ಪ್ರಮುಖ ಅಂಗವಾಗಿರುವ ವಕೀಲರು ಸಮಾಜದಲ್ಲಿ ನ್ಯಾಯ ಮತ್ತು ಕಾನೂನಿನ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ವಕೀಲರ ಮೇಲೆಯೇ ನಿರಂತರವಾಗಿ ಹಲ್ಲೆ, ಬೆದರಿಕೆ ಹಾಗೂ ದೌರ್ಜನ್ಯಗಳು ನಡೆಯುತ್ತಿರುವುದು ಗಂಭೀರ ವಿಚಾರವಾಗಿದೆ. ಇಂತಹ ಘಟನೆಗಳನ್ನು ತಡೆಗಟ್ಟಲು ಸರ್ಕಾರ ತಕ್ಷಣವೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಕೀಲರು ಯಾವುದೇ ಭಯ, ಒತ್ತಡ ಹಾಗೂ ಬೆದರಿಕೆಗಳಿಲ್ಲದೆ ಸ್ವತಂತ್ರವಾಗಿ ವೃತ್ತಿ ನಿರ್ವಹಿಸಲು ಸುರಕ್ಷಿತ ವಾತಾವರಣ ನಿರ್ಮಿಸಬೇಕು. ವಕೀಲರ ಮೇಲಿನ ಹಲ್ಲೆ ಮತ್ತು ಹತ್ಯೆ ಪ್ರಕರಣಗಳ ಆರೋಪಿಗಳನ್ನು ಶೀಘ್ರ ಬಂಧಿಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ವಕೀಲರ ಹಿತರಕ್ಷಣೆಗಾಗಿ ಸಮಗ್ರ ರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ವಕೀಲರ ಸುರಕ್ಷತೆಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸದೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕು ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ಕಾರ್ಯದರ್ಶಿ ಈಶ್ವರ ಜಾದವ್, ಆಶಿಕ್ ಅಹ್ಮದ್, ಕೆ. ಚಂದ್ರಶೇಖರ, ಸಂಜೀವ್ ಗೌಡ ಐದಬಾವಿ, ಶಶಿಧರ್ ಹೊಸಮನಿ, ಪ್ರಭುಗೌಡ, ಮೋಹಿನ್ ಪಟೇಲ್, ಶಿವಶಂಕ್ರಪ್ಪ, ಅದಪ್ಪ ನಾಗವೇಣಿ, ಪರಿದಾ ವೀಣಾ ಸೇರಿದಂತೆ ಸಂಘದ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.



