ಲಿಂಗಸುಗೂರು: ಅಹಿಂದ ಚಳವಳಿಯ ರಾಯಚೂರು ಜಿಲ್ಲಾ ಘಟಕದ ಸಂಚಾಲಕರಾಗಿ ವಕೀಲ ಹರಿಶ್ಚಂದ್ರ ರಾಠೋಡ ಅವರನ್ನು ನೇಮಕ ಮಾಡಿ ಸಂಘಟನೆಯ ರಾಜ್ಯ ನಾಯಕತ್ವ ಆದೇಶ ಹೊರಡಿಸಿದೆ.

ಅಹಿಂದ ಚಳವಳಿಯ ರಾಜ್ಯ ಮುಖ್ಯ ಸಂಚಾಲಕ ಎಸ್. ರಾಮಮೂರ್ತಿ ಹಾಗೂ ರಾಜ್ಯ ಸಂಚಾಲಕ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಶರಣಪ್ಪ ಕಡಗೋಲ ಅವರು ಈ ನೇಮಕಾತಿ ಆದೇಶ ಹೊರಡಿಸಿದ್ದು, ಜಿಲ್ಲೆಯಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿಯನ್ನು ಹರಿಶ್ಚಂದ್ರ ರಾಠೋಡ ಅವರಿಗೆ ವಹಿಸಿದ್ದಾರೆ.

ಜಿಲ್ಲೆಯಾದ್ಯಂತ ಅಹಿಂದ ಚಳವಳಿಯ ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸುವುದರ ಜೊತೆಗೆ ಎಲ್ಲ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ವಿಸ್ತರಿಸಬೇಕು. ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯಗಳ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಚಳವಳಿಯ ಪ್ರಮುಖ ಉದ್ದೇಶವಾಗಿದೆ.

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಬಲಪಡಿಸಿ, ಪದಾಧಿಕಾರಿಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಅಹಿಂದ ಚಳವಳಿಯನ್ನು ಪರಿಣಾಮಕಾರಿಯಾಗಿ ಮುನ್ನಡೆಸುವಂತೆ ನೇಮಕಾತಿ ಆದೇಶದಲ್ಲಿ ಸೂಚಿಸಲಾಗಿದೆ.