ಹಟ್ಟಿ ಚಿನ್ನದ ಗಣಿ: ಪಟ್ಟಣದ ವಿವಿಧೆಡೆ 71ನೇ ಕನ್ನಡ ರಾಜ್ಯೋತ್ಸವವನ್ನು ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕನ್ನಡ ಧ್ವಜಾರೋಹಣ ನೆರವೇರಿಸುವ ಮೂಲಕ ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಅಶೋಕ ಡೇವಿಡ್ ವೃತ್ತ, ವಿಲೇಜ್ ಬಸ್ ನಿಲ್ದಾಣ ಹಾಗೂ ಹಟ್ಟಿ ಕ್ಯಾಂಪ್ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್. ಶಿವರಾಮೇಗೌಡ ಬಣ) ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯ ಮಹತ್ವವನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ, ಜಲ ಹಾಗೂ ಜನಜೀವನದ ಅಸ್ಮಿತೆಯಾಗಿದೆ. ಕನ್ನಡ ಭಾಷೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಕನ್ನಡಿಗರ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.

‘ಮಾನವ ಕುಲ ತಾನೊಂದೇ ವಲಂ’ ಎಂಬ ವಿಶ್ವಮಾನವ ಸಂದೇಶವನ್ನು ಸಾರಿದ ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಶ್ರೀಮಂತವಾಗಿದೆ. ಕನ್ನಡ ಸಾಹಿತ್ಯವು ಮಾನವೀಯ ಮೌಲ್ಯಗಳು, ಸಮಾನತೆ, ಸಹಬಾಳ್ವೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಪ್ರತಿಪಾದಿಸುತ್ತಾ ಬಂದಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ದೊರೆಯಬೇಕು. ಕನ್ನಡದ ಬಳಕೆಯನ್ನು ದೈನಂದಿನ ಜೀವನದಲ್ಲಿ ಹೆಚ್ಚಿಸುವುದರೊಂದಿಗೆ ಯುವಪೀಳಿಗೆಯಲ್ಲಿ ಭಾಷಾಭಿಮಾನ ಬೆಳೆಸಬೇಕು. ಕನ್ನಡ ನಾಡಿನ ಇತಿಹಾಸ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕರೆ ನೀಡಿದರು.

ರಾಜ್ಯೋತ್ಸವದ ಅಂಗವಾಗಿ ಸಂಜೆ ಹಟ್ಟಿ ಚಿನ್ನದ ಗಣಿ ಕ್ರೀಡಾ ಸಂಸ್ಥೆಯ ಆವರಣದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯ ಇಡಿ ಪ್ರಕಾಶ ಬಹದ್ದೂರ್, ಡಿಜಿಎಂ (ಎಂಜಿನಿಯರಿಂಗ್) ಜ್ಯೋತಿಕುಮಾರ್ ಶೆಟ್ಟಿ, ಆರ್.ಸಿ. ಸುರೇಶ್, ರಮೇಶ್, ವಿಶ್ವನಾಥ್ ನಾಯಕ, ಜಗನ್ನಾಥ್, ಕ್ರೀಡಾ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾಂತ, ಕರ್ನಾಟಕ ರಕ್ಷಣಾ ವೇದಿಕೆಯ ಹಟ್ಟಿ ಘಟಕದ ಅಧ್ಯಕ್ಷ ಮೌನೇಶ್ ಕಾಕನಗರ, ಶಿವರಾಮೇಗೌಡ ಬಣದ ರಾಜ್ಯ ಸಂಚಾಲಕ ಕೆ.ವಿ. ಕಳ್ಳಿಮಠ, ನರಸಪ್ಪ ಯಾದವ್, ವಕೀಲ ಸಂಶುದ್ದೀನ್, ಪರಮೇಶ್ ಯಾದವ್, ಶರಣಗೌಡ ಗುರಿಕಾರ, ಬಸವರಾಜಗೌಡ ಗುರಿಕಾರ, ನಂದಯ್ಯ, ವೀರೇಶ್ ಮೇದಿನಾಪುರ ಸೇರಿದಂತೆ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.