ಲಿಂಗಸುಗೂರು: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಲಿಂಗಸುಗೂರಿನ ಡಾ. ಸುಧಾಮೂರ್ತಿ ಇನೋ ಮಹಿಳಾ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನವೆಂಬರ್ 2 ಮತ್ತು 3ರಂದು ಅಂತರ್ ಮಹಿಳಾ ಮಹಾವಿದ್ಯಾಲಯಗಳ ಕಬಡ್ಡಿ ಮತ್ತು ಥ್ರೋಬಾಲ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ರಮೇಶ ವೆಂಕಟಾಪುರ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟವನ್ನು ಡಾ. ಸುಧಾಮೂರ್ತಿ ಇನೋ ಮಹಿಳಾ ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ಪಂದ್ಯಾವಳಿಗಳು ಹಾಗೂ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಕ್ರೀಡಾಕೂಟದಲ್ಲಿ ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲ, ಹಾವೇರಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳ ವಿವಿಧ ಮಹಿಳಾ ಮಹಾವಿದ್ಯಾಲಯಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಕಬಡ್ಡಿ ಹಾಗೂ ಥ್ರೋಬಾಲ್ ಪಂದ್ಯಾವಳಿಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಎರಡನೇ ಬಾರಿಗೆ ಈ ಕ್ರೀಡಾಕೂಟದ ಆತಿಥ್ಯ ವಹಿಸುವ ಅವಕಾಶ ದೊರೆತಿರುವುದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳಾ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ಪಂದ್ಯಾವಳಿಗಳು ಉತ್ತಮ ವೇದಿಕೆಯಾಗಲಿವೆ. ವಿದ್ಯಾರ್ಥಿನಿಯರಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು, ನಾಯಕತ್ವ ಹಾಗೂ ತಂಡದ ಮನೋಭಾವ ಬೆಳೆಸಲು ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ನವೆಂಬರ್ 2 ಮತ್ತು 3ರಂದು ನಡೆಯಲಿರುವ ಪಂದ್ಯಾವಳಿಗಳು ಹಾಗೂ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ವೀಕ್ಷಿಸಲು ತಾಲೂಕಿನ ಹಿರಿಯರು, ಕ್ರೀಡಾಭಿಮಾನಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡಾಕೂಟವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಸಲಿಂಗಪ್ಪ ಗುಡಿಮನಿ, ಜಮದಗ್ನಿ ಭವಾನಿ, ಬಾಲಪ್ಪ ಹಿರೇಮನಿ, ಸೋಮನಾಥ ಸೇರಿದಂತೆ ಇತರರು ಉಪಸ್ಥಿತರಿದ್ದರು.



