ಲಿಂಗಸುಗೂರು: ಸಹಕಾರಿ ಸಂಘಗಳು ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೆ ಜನರ ಆರ್ಥಿಕ ಪ್ರಗತಿ, ಸಾಮಾಜಿಕ ಏಳಿಗೆ ಹಾಗೂ ಪರಸ್ಪರ ವಿಶ್ವಾಸವನ್ನು ಬೆಳೆಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಎಂದು ದೇವರಭೂಪುರ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ನ್ಯಾಯಪಥ ಸಹಕಾರಿ ಪತ್ತಿನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಲಿಂಗಸುಗೂರು ತಾಲೂಕು ವಿವಿಧ ವೈಶಿಷ್ಟ್ಯಗಳಿಂದ ಕೂಡಿದ್ದು, ಇಲ್ಲಿನ ಜನರು ಹಲವು ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಮಾಜದ ವಿವಿಧ ವರ್ಗಗಳ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ವಕೀಲರು ಒಗ್ಗೂಡಿ ಸಹಕಾರಿ ಸಂಘ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿ ಸಂಘದ ಪ್ರತಿಯೊಂದು ನಿರ್ಧಾರದಲ್ಲಿಯೂ ನ್ಯಾಯವಿರಬೇಕು. ಪ್ರತಿಯೊಂದು ಹಣಕಾಸಿನ ವ್ಯವಹಾರದಲ್ಲಿಯೂ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ಸಂಘದ ಪ್ರತಿಯೊಬ್ಬ ಸದಸ್ಯನಿಗೂ ಸಮಾನ ಗೌರವ ಹಾಗೂ ಅವಕಾಶ ದೊರೆಯಬೇಕು. ಈ ತತ್ವಗಳನ್ನು ಅನುಸರಿಸಿದಾಗ ಮಾತ್ರ ಸಹಕಾರಿ ಸಂಘಗಳು ಜನರ ವಿಶ್ವಾಸ ಗಳಿಸಿ ದೀರ್ಘಕಾಲ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸೋಮಶೇಖರ ಎ., ಸಹಕಾರಿ ಸಂಘವನ್ನು ಸ್ಥಾಪಿಸುವುದು ಸುಲಭ. ಆದರೆ ಜನರ ವಿಶ್ವಾಸ ಗಳಿಸಿ ಅದನ್ನು ದೀರ್ಘಕಾಲ ಉಳಿಸಿಕೊಳ್ಳುವುದು ದೊಡ್ಡ ಜವಾಬ್ದಾರಿಯಾಗಿದೆ. ಸಂಘದ ಪದಾಧಿಕಾರಿಗಳು ಈ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸಂಘದ ಸದಸ್ಯರು ಇಡುವ ನಂಬಿಕೆಯನ್ನು ಗೌರವಿಸುವುದರೊಂದಿಗೆ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಬೇಕು. ಸಂಘದ ಆಡಳಿತದಲ್ಲಿ ಶಿಸ್ತು, ಜವಾಬ್ದಾರಿ ಹಾಗೂ ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸಹಕಾರಿ ಸಂಘದ ಬೆಳವಣಿಗೆ ಎಂದರೆ ಕೇವಲ ಆರ್ಥಿಕ ಲಾಭ ಗಳಿಸುವುದಲ್ಲ. ಸಂಘದ ಮೂಲಕ ಎಷ್ಟು ಜನರಿಗೆ ನೆರವು ದೊರೆಯಿತು, ಎಷ್ಟು ಕುಟುಂಬಗಳ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಉಂಟಾಯಿತು ಎಂಬುದು ಮುಖ್ಯವಾಗಿದೆ. ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಸಂಘಗಳು ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶೆ ಮಂಜುಳಾ ಉಂಡಿ, ಪ್ರಧಾನ ನ್ಯಾಯಾಧೀಶ ಅಂಬಣ್ಣ ಕೆ., ಹೆಚ್ಚುವರಿ ನ್ಯಾಯಾಧೀಶ ಸಿದ್ರಾಮರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ್, ನ್ಯಾಯಪಥ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಸೂರ್ಯಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.