ಮಾನ್ವಿ: ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ಶಿಸ್ತು, ಪ್ರಾಮಾಣಿಕತೆ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಜವಾಬ್ದಾರಿ ತಂದೆ-ತಾಯಿಯರ ಮೇಲಿದೆ ಎಂದು ಸಂಪನ್ಮೂಲ ವ್ಯಕ್ತಿ ಆಂಜನೇಯ ನಸಲಾಪುರ ಹೇಳಿದರು.
ಪಟ್ಟಣದ ಲೋಯೋಲಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಮನೆಯೇ ಮಕ್ಕಳ ಮೊದಲ ಪಾಠಶಾಲೆಯಾಗಿದ್ದು, ತಾಯಿ ಮೊದಲ ಗುರು ಹಾಗೂ ತಂದೆ ಎರಡನೇ ಗುರು ಎಂಬುದನ್ನು ಪೋಷಕರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಿಗೆ ಆದ್ಯತೆ ನೀಡದೆ ಮಕ್ಕಳಲ್ಲಿ ನೈತಿಕ ಮೌಲ್ಯಗಳು, ಉತ್ತಮ ನಡವಳಿಕೆ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ, ಓದಿನ ಒತ್ತಡ ಹಾಗೂ ಮಾನಸಿಕ ಆತಂಕದಿಂದ ಮಕ್ಕಳನ್ನು ದೂರವಿಡಲು ಪೋಷಕರು ಪ್ರತಿದಿನ ಅವರೊಂದಿಗೆ ಸಮಯ ಕಳೆಯಬೇಕು. ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಇತರ ಮಕ್ಕಳೊಂದಿಗೆ ಹೋಲಿಕೆ ಮಾಡದೆ ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ವಿಶೇಷವಾಗಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಮನೆಯಲ್ಲಿ ಶಾಂತ ವಾತಾವರಣ ಕಲ್ಪಿಸಬೇಕು. ಅಂಕಗಳಿಗಿಂತ ಮಕ್ಕಳ ಪರಿಶ್ರಮಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಮಯದ ಸದ್ಬಳಕೆ, ದುಡಿಮೆಯ ಮೌಲ್ಯ, ಉತ್ತಮ ಸ್ನೇಹಿತರ ಆಯ್ಕೆ ಹಾಗೂ ದುಶ್ಚಟಗಳಿಂದ ದೂರವಿರುವ ಕುರಿತು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಪಾಲಕರ ಸಭೆಯನ್ನು ಉದ್ಘಾಟಿಸಿದ ಫಾದರ್ ಸೈರಿಲ್ ರಾಜ್ ಎಸ್.ಜೆ. ಮಾತನಾಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನದಲ್ಲಿ ಪೋಷಕರ ಜವಾಬ್ದಾರಿ ಪ್ರಮುಖವಾಗಿದ್ದು, ಶಿಕ್ಷಕರು ಮತ್ತು ಪಾಲಕರ ನಡುವಿನ ಸಹಕಾರದಿಂದ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಸಿಸ್ಟರ್ ಜೂಲಿಟ್ ಮೊಂಟೆರೋ ಯುಎಫ್ಎಸ್, ಸಹಾಯಕ ಮುಖ್ಯಗುರು ಡೇವಿಡ್, ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.



