ಮಾನ್ವಿ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯದ ಪಕ್ಷಿವೀಕ್ಷಕ ಸಮುದಾಯದ ವತಿಯಿಂದ ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಹಮ್ಮಿಕೊಂಡಿದ್ದ ‘ಕರ್ನಾಟಕ ರಾಜ್ಯೋತ್ಸವ ಪಕ್ಷಿಗಣತಿ–2026’ ಕಾರ್ಯಕ್ರಮವು ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯಿತು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 28ಕ್ಕೂ ಹೆಚ್ಚು ಪಕ್ಷಿಪ್ರೇಮಿಗಳು ಭಾಗವಹಿಸಿ ಒಟ್ಟು 137 ಪ್ರಭೇದಗಳ ಪಕ್ಷಿಗಳನ್ನು ಗುರುತಿಸಿ ದಾಖಲೀಕರಣ ಮಾಡಿದ್ದಾರೆ.
ತಾಲೂಕಿನ ಮದ್ಲಾಪುರ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ನಡೆದ ಪಕ್ಷಿಗಣತಿಯ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಪುರುಷೋತ್ತಮ ರಾವ್ ಜೀ, ಮಾನ್ವಿ ತಾಲೂಕು ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿದ್ದು, ಖುಷ್ಕಿ ಜಮೀನು, ನೀರಾವರಿ ಪ್ರದೇಶಗಳು ಹಾಗೂ ನದಿ ತೀರಗಳಲ್ಲಿ ವಿವಿಧ ಪ್ರಭೇದಗಳ ಪ್ರಾಣಿ, ಪಕ್ಷಿಗಳು ಕಂಡುಬರುತ್ತವೆ ಎಂದು ತಿಳಿಸಿದರು.
ಪರಿಸರ ಸಮತೋಲನ ಕಾಪಾಡುವಲ್ಲಿ ಪಕ್ಷಿಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಂದು ಪ್ರದೇಶದಲ್ಲಿರುವ ಪಕ್ಷಿಗಳ ಪ್ರಭೇದಗಳನ್ನು ಗುರುತಿಸಿ ಅವುಗಳ ಮಾಹಿತಿಯನ್ನು ದಾಖಲಿಸುವುದು ಜೀವವೈವಿಧ್ಯ ಸಂರಕ್ಷಣೆಯ ದೃಷ್ಟಿಯಿಂದ ಅಗತ್ಯವಾಗಿದೆ. ರಾಜ್ಯದ ಪಕ್ಷಿವೀಕ್ಷಕ ಸಮುದಾಯ ಕೈಗೊಂಡಿರುವ ಈ ಪಕ್ಷಿಗಣತಿಯಿಂದ ಸ್ಥಳೀಯ ಹಾಗೂ ವಲಸೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಪಕ್ಷಿಗಳ ಪ್ರಭೇದಗಳು, ಅವುಗಳ ಆವಾಸಸ್ಥಾನ ಹಾಗೂ ಪರಿಸರದೊಂದಿಗೆ ಹೊಂದಿರುವ ಸಂಬಂಧದ ಕುರಿತು ಅಧ್ಯಯನ ನಡೆಸಲು ಇಂತಹ ಗಣತಿಗಳು ಸಹಕಾರಿಯಾಗುತ್ತವೆ. ಸಂಗ್ರಹಿಸಲಾದ ಮಾಹಿತಿಯು ಮುಂದಿನ ಪೀಳಿಗೆಯ ಸಂಶೋಧಕರು ಹಾಗೂ ಪಕ್ಷಿಪ್ರೇಮಿಗಳಿಗೆ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷಿಪ್ರೇಮಿ ಸಲ್ಲಾವುದ್ದಿನ್ ಮಾತನಾಡಿ, ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆದ ಪಕ್ಷಿಗಣತಿಯಲ್ಲಿ 28ಕ್ಕೂ ಹೆಚ್ಚು ಪಕ್ಷಿವೀಕ್ಷಕರು ಭಾಗವಹಿಸಿದ್ದು, ಒಟ್ಟು 137 ವಿವಿಧ ಪ್ರಭೇದಗಳ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿದೆ. ಮಾನ್ವಿ ತಾಲೂಕಿನಲ್ಲಿಯೇ 70ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳನ್ನು ಗುರುತಿಸಿರುವುದು ಈ ಭಾಗದ ಜೀವವೈವಿಧ್ಯದ ವಿಶೇಷತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಮಾನ್ವಿ ತಾಲೂಕಿನ ಪಕ್ಷಿಗಣತಿಯಲ್ಲಿ ಇಂಡಿಯನ್ ರೋಲರ್, ಇಂಡಿಯನ್ ಗ್ರೇ ಹಾರ್ನ್ಬಿಲ್, ಬ್ಲಾಕ್ ಬಿಲ್ಡ್ ಟರ್ನ್, ರೆಡ್ ಅವಡವಟ್, ಪರ್ಪಲ್ ಸನ್ಬರ್ಡ್, ವೂಲಿ ನೆಕ್ಡ್ ಸ್ಟಾರ್ಕ್, ಫ್ಲೆಮಿಂಗೊ, ಏಷಿಯನ್ ಓಪನ್ಬಿಲ್ ಸ್ಟಾರ್ಕ್, ಪೇಂಟೆಡ್ ಸ್ಟಾರ್ಕ್, ಯುರೇಷಿಯನ್ ಸ್ಪೂನ್ಬಿಲ್, ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್, ಏಷಿಯನ್ ಗ್ರೀನ್ ಬೀ ಈಟರ್, ಬ್ಲಾಕ್ ಡ್ರೊಂಗೊ, ಬ್ಲಾಕ್ ಹೆಡೆಡ್ ಐಬಿಸ್, ರೆಡ್ ನೇಪ್ಡ್ ಐಬಿಸ್ ಹಾಗೂ ಗ್ಲೋಸಿ ಐಬಿಸ್ ಸೇರಿದಂತೆ ಹಲವು ಪ್ರಭೇದಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದರು.
ಇದಲ್ಲದೆ ಬ್ರಾಹ್ಮಿಣಿ ಸ್ಟಾರ್ಲಿಂಗ್, ರೋಸಿ ಸ್ಟಾರ್ಲಿಂಗ್, ಕಾಮನ್ ಹೂಪೋ, ಇಂಡಿಯನ್ ಗೋಲ್ಡನ್ ಓರಿಯಲ್, ನವಿಲು, ಗ್ರೇ ಫ್ರಾಂಕೊಲಿನ್, ರೆಡ್ ವೆಂಟೆಡ್ ಬುಲ್ಬುಲ್, ಶಿಕ್ರಾ, ಕಾಮನ್ ಕೆಸ್ಟ್ರೆಲ್, ಬೇ ಬ್ಯಾಕ್ಡ್ ಶ್ರೈಕ್, ಬ್ಲಾಕ್ ವಿಂಗ್ಡ್ ಕೈಟ್, ಬ್ಲಾಕ್ ವಿಂಗ್ಡ್ ಸ್ಟಿಲ್ಟ್, ಕಾಮನ್ ಮೈನಾ, ಇಂಡಿಯನ್ ಪೈಡ್ ಮೈನಾ, ಇಂಡಿಯನ್ ರಾಬಿನ್, ಇಂಡಿಯನ್ ಸಿಲ್ವರ್ಬಿಲ್, ಲಾಫಿಂಗ್ ಡವ್, ರೆಡ್ ಕಾಲರ್ಡ್ ಡವ್ ಹಾಗೂ ರೋಸ್ ರಿಂಗ್ಡ್ ಪ್ಯಾರಕೀಟ್ ಪ್ರಭೇದಗಳು ದಾಖಲಾಗಿವೆ.
ಸೈಬೀರಿಯನ್ ಸ್ಟೋನ್ಚಾಟ್, ಪೈಡ್ ಬುಶ್ಚಾಟ್, ಆಶಿ ಕ್ರೌನ್ಡ್ ಸ್ಪ್ಯಾರೋ ಲಾರ್ಕ್, ಆಶಿ ಪ್ರಿನಿಯಾ, ಬಯಾ ವೀವರ್, ಬ್ಲಾಕ್ ಕ್ರೌನ್ಡ್ ನೈಟ್ ಹೆರಾನ್, ಯುರೇಷಿಯನ್ ಕಾಲರ್ಡ್ ಡವ್, ಯೆಲ್ಲೋ ಥ್ರೋಟೆಡ್ ಸ್ಪ್ಯಾರೋ, ಹೌಸ್ ಸ್ಪ್ಯಾರೋ, ಕ್ಯಾಟಲ್ ಈಗ್ರೆಟ್, ಲಿಟಲ್ ಈಗ್ರೆಟ್, ಗ್ರೇ ಹೆರಾನ್, ಪರ್ಪಲ್ ಹೆರಾನ್, ರೆಡ್ ವಾಟಲ್ಡ್ ಲ್ಯಾಪ್ವಿಂಗ್, ರಾಕ್ ಪಿಜನ್, ವೈಟ್ ಬ್ರೆಸ್ಟೆಡ್ ವಾಟರ್ಹೆನ್ ಹಾಗೂ ವೈಟ್ ಥ್ರೋಟೆಡ್ ಕಿಂಗ್ಫಿಶರ್ ಪಕ್ಷಿಗಳನ್ನೂ ಗುರುತಿಸಲಾಗಿದೆ.
ವುಡ್ ಸ್ಯಾಂಡ್ಪೈಪರ್, ವೈಟ್ ಬ್ರೌಡ್ ವಾಗ್ಟೇಲ್, ಓರಿಯಂಟಲ್ ಮ್ಯಾಗ್ಪೈ ರಾಬಿನ್, ಲಾಂಗ್ ಟೈಲ್ಡ್ ಶ್ರೈಕ್, ಲಿಟಲ್ ಕಾರ್ಮೊರೆಂಟ್, ಲಾರ್ಜ್ ಗ್ರೇ ಬ್ಯಾಬ್ಲರ್, ಲಿಟಲ್ ರಿಂಗ್ಡ್ ಪ್ಲೋವರ್, ಥಿಕ್ ನೀ, ಪ್ಯಾಡಿ ಪಿಪಿಟ್ ಹಾಗೂ ವೆಸ್ಟರ್ನ್ ಮಾರ್ಷ್ ಹ್ಯಾರಿಯರ್ ಸೇರಿದಂತೆ ಹಲವು ಪಕ್ಷಿಗಳ ಮಾಹಿತಿಯನ್ನು ದಾಖಲಿಸಲಾಗಿದೆ ಎಂದು ಸಲ್ಲಾವುದ್ದಿನ್ ತಿಳಿಸಿದರು.
ತುಂಗಭದ್ರಾ ನದಿ ತೀರ, ಕೃಷಿ ಭೂಮಿ ಹಾಗೂ ಜಲಮೂಲಗಳ ಸುತ್ತಮುತ್ತ ಕಂಡುಬರುವ ಪಕ್ಷಿಗಳ ದಾಖಲೀಕರಣವು ಈ ಭಾಗದ ಪರಿಸರ ಮತ್ತು ಜೀವವೈವಿಧ್ಯ ಅಧ್ಯಯನಕ್ಕೆ ಮಹತ್ವದ ಮಾಹಿತಿಯಾಗಲಿದೆ. ಪಕ್ಷಿಗಳ ಆವಾಸಸ್ಥಾನಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಪಕ್ಷಿವೀಕ್ಷಕರು ಅಭಿಪ್ರಾಯಪಟ್ಟರು.
ಪಕ್ಷಿಗಣತಿಯ ಕೊನೆಯ ದಿನ ವಲಯ ಅರಣ್ಯಾಧಿಕಾರಿ ಪುರುಷೋತ್ತಮ ರಾವ್ ಜೀ ಅವರು ಮದ್ಲಾಪುರ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಪಕ್ಷಿವೀಕ್ಷಣೆ ನಡೆಸಿದರು. ಕಾರ್ಯಕ್ರಮದಲ್ಲಿ ಪಕ್ಷಿಪ್ರೇಮಿಗಳು ಹಾಗೂ ಪಕ್ಷಿವೀಕ್ಷಕ ಸಮುದಾಯದ ಸದಸ್ಯರು ಭಾಗವಹಿಸಿದ್ದರು.



