ಮಾನ್ವಿ: ರಾಯಚೂರಿನಲ್ಲಿ ಇತ್ತೀಚೆಗೆ ದುಷ್ಕರ್ಮಿಯಿಂದ ಹತ್ಯೆಗೀಡಾದ ಆರ್ಯವೈಶ್ಯ ಸಮುದಾಯದ ಸಣ್ಣ ವ್ಯಾಪಾರಿ ದಿವಂಗತ ಬಾಪುರ ನರಸಿಂಹ ಶೆಟ್ಟಿ ಅವರ ಕುಟುಂಬಕ್ಕೆ ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ₹2 ಲಕ್ಷ ಆರ್ಥಿಕ ನೆರವು ನೀಡಲಾಯಿತು.
ಮಾನ್ವಿ ತಾಲೂಕು ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ಅಧ್ಯಕ್ಷ ಆರ್. ಮುತ್ತುರಾಜ್ ಶೆಟ್ಟಿ ಅವರು ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರ ಸಮ್ಮುಖದಲ್ಲಿ ಮೃತರ ಕುಟುಂಬಕ್ಕೆ ₹2 ಲಕ್ಷ ಸಹಾಯಧನ ಹಸ್ತಾಂತರಿಸಿದರು.
ಬಾಪುರ ನರಸಿಂಹ ಶೆಟ್ಟಿ ಅವರ ಅಕಾಲಿಕ ನಿಧನದಿಂದ ಕುಟುಂಬವು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಮಾನವೀಯ ನೆಲೆಯಲ್ಲಿ ನೆರವು ನೀಡುವ ಉದ್ದೇಶದಿಂದ ಸಂಘದ ವತಿಯಿಂದ ಆರ್ಥಿಕ ಸಹಾಯ ಒದಗಿಸಲಾಗಿದೆ.
ಸಮಾಜದ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ನೆರವಾಗುವುದು ಸಂಘದ ಸಾಮಾಜಿಕ ಜವಾಬ್ದಾರಿಯಾಗಿದೆ. ಇಂತಹ ಕಷ್ಟದ ಸಂದರ್ಭಗಳಲ್ಲಿ ಸಮುದಾಯದವರು ಒಗ್ಗಟ್ಟಿನಿಂದ ನಿಂತು ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ತುಂಬುವ ಅಗತ್ಯವಿದೆ ಎಂಬ ಆಶಯದೊಂದಿಗೆ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಬಿ. ಈರಣ್ಣ, ಆರ್. ದ್ವಾರಕನಾಥ, ಆರ್. ಪುರುಷೋತ್ತಮ, ಆರ್. ಪಾಂಡುರಂಗ, ಇ. ಬಸವ ಪ್ರಕಾಶ, ಆರ್. ನಾಗರಾಜ, ಆರ್. ಮಂಜುನಾಥ, ಬಿ. ವೀರೇಶಬಾಬು, ಎಂ. ಕೇಶವಯ್ಯ, ಡಿ. ಮಂಜುನಾಥ, ಕೆ. ರಾಮಚಂದ್ರ, ಆರ್. ಸತೀಶಚಂದ್ರ, ಎಸ್. ಪ್ರಾಣೇಶ, ಬಿ. ಶಶಿಧರ ಸೇರಿದಂತೆ ಮಾನ್ವಿ ಹಾಗೂ ರಾಯಚೂರು ಆರ್ಯವೈಶ್ಯ ಸಮಾಜದ ಮುಖಂಡರು ಉಪಸ್ಥಿತರಿದ್ದರು.



