ಮಾನ್ವಿ: ಪಟ್ಟಣದ ಸುಮಾರು 50 ಸಾವಿರ ಜನರಿಗೆ ಕುಡಿಯುವ ನೀರು ಪೂರೈಸುವ ಪುರಸಭೆಯ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ರಬ್ಬಣಕಲ್ ಗ್ರಾಮದ ಸಮೀಪದಲ್ಲಿರುವ ಮಾನ್ವಿ ಪುರಸಭೆಯ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ ನೀರಿನ ಸಂಗ್ರಹ ಹಾಗೂ ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಮಾನ್ವಿ ಪಟ್ಟಣದ ಸುಮಾರು 50 ಸಾವಿರ ಜನಸಂಖ್ಯೆಗೆ ಈ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದರೆ ಪ್ರಸ್ತುತ ಕೆರೆಯಲ್ಲಿ ಕೇವಲ ಮೂರು ಮೀಟರ್‌ನಷ್ಟು ನೀರು ಸಂಗ್ರಹವಿರುವುದು ಆತಂಕಕಾರಿ ಸಂಗತಿಯಾಗಿದೆ. ಮುಂದಿನ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

85ನೇ ವಿತರಣಾ ಕಾಲುವೆಯ ಮೂಲಕ ರೊಟೇಷನ್ ಪದ್ಧತಿಯಂತೆ ಎಂಟು ದಿನಗಳವರೆಗೆ ಕೆರೆ ತುಂಬಿಸಲು ನೀರು ಹರಿಸಲಾಗುತ್ತಿದೆ. ಈ ಅವಧಿಯಲ್ಲಿ ಕಾಲುವೆಯಿಂದ ಹರಿಯುವ ನೀರು ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ, ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೆರೆಗೆ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಅವರಿಗೆ ನಿರ್ದೇಶನ ನೀಡಿದರು.

ಕಾಲುವೆಯಲ್ಲಿ ನೀರು ಹರಿಯುತ್ತಿರುವ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಪಟ್ಟಣದ ಜನರು ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಪುರಸಭೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಕೆರೆ ಭರ್ತಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಮಾನ್ವಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಅಮೃತ್ 2.0 ಯೋಜನೆಯ ಕಾಮಗಾರಿಯ ಪ್ರಗತಿ ಕುರಿತು ಪರಿಶೀಲಿಸಿದರು.

ಅಮೃತ್ 2.0 ಯೋಜನೆಯ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬೋಸರಾಜು, ಕುಡಿಯುವ ನೀರಿನಂತಹ ಅತ್ಯಗತ್ಯ ಸೌಲಭ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ವಿಳಂಬ ಮಾಡುವುದು ಸರಿಯಲ್ಲ. ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಗೆ ವೇಗ ನೀಡಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಪಟ್ಟಣದ ಜನರಿಗೆ ಸಮರ್ಪಕ ಹಾಗೂ ನಿರಂತರ ಕುಡಿಯುವ ನೀರು ಪೂರೈಸುವುದು ಸ್ಥಳೀಯ ಆಡಳಿತದ ಪ್ರಮುಖ ಜವಾಬ್ದಾರಿಯಾಗಿದೆ. ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾದ ನಂತರ ಪರ್ಯಾಯ ವ್ಯವಸ್ಥೆ ಹುಡುಕುವ ಬದಲು ಈಗಿನಿಂದಲೇ ಅಗತ್ಯ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಹಂಪಯ್ಯ ನಾಯಕ, ಸಿರವಾರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಬ್ರಿಜೇಶ್ ಪಾಟೀಲ್, ಮುಖಂಡರಾದ ಎ. ಬಾಲಸ್ವಾಮಿ ಕೊಡ್ಲಿ, ರೌಡ್ರು ಮಹಾಂತೇಶ ಸ್ವಾಮಿ, ಸಾಬೀರ್ ಪಾಷಾ, ಜಯಪ್ರಕಾಶ್, ರಾಮಕೃಷ್ಣ, ಡಿ. ನಾಗೇಶ್ ಕಬ್ಯಾರ್, ಸತ್ತಾರ್ ಬಂಗ್ಲೆವಾಲೆ, ಕಾಮೇಶ್, ಪುರಸಭೆ ಆರೋಗ್ಯ ನಿರೀಕ್ಷಕ ಮಹೇಶ್ ಕುಮಾರ್, ನೀರಾವರಿ ಇಲಾಖೆ ಅಧಿಕಾರಿಗಳು, ಪುರಸಭೆ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.