ರಾಯಚೂರು, ನ.4: ಕನ್ನಡ ಚಿತ್ರರಂಗದ ಹಿರಿಯ ನಟ ಶಶಿಕುಮಾರ್ ಅವರ ಪುತ್ರ, ಯುವ ನಟ ಆದಿತ್ಯ ಶಶಿಕುಮಾರ್ ಅವರು ತಮ್ಮ ಮುಂಬರುವ ‘ರಾಶಿ’ ಚಿತ್ರದ ನಿರ್ಮಾಪಕ ಅಖಿಲೇಶ್ ಹಾಗೂ ಚಿತ್ರತಂಡದ ಸದಸ್ಯರೊಂದಿಗೆ ಬುಧವಾರ ನಗರದ ಓಂ ಸಾಯಿ ಧ್ಯಾನ ಮಂದಿರಕ್ಕೆ ಭೇಟಿ ನೀಡಿ ಶಿರಡಿ ಸಾಯಿಬಾಬಾ ಅವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ನವೆಂಬರ್ 13ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ‘ರಾಶಿ’ ಚಿತ್ರದ ಯಶಸ್ಸಿಗಾಗಿ ಚಿತ್ರತಂಡವು ಮೊದಲು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು, ನಂತರ ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ನಟ ಆದಿತ್ಯ ಶಶಿಕುಮಾರ್, ತಮ್ಮ ಕುಟುಂಬಕ್ಕೆ ಶಿರಡಿ ಸಾಯಿಬಾಬಾ ಅವರ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆಯಿದೆ. ತಮ್ಮ ಮನೆಯ ಹೆಸರನ್ನು ತಂದೆ ಶಶಿಕುಮಾರ್ ಅವರು ‘ದ್ವಾರಕಾಮಾಯಿ’ ಎಂದು ಇಟ್ಟಿದ್ದು, ಮನೆಯಲ್ಲಿ ಸಾಯಿಬಾಬಾ ಅವರ ಬೃಹತ್ ಭಾವಚಿತ್ರವಿದೆ. ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೆ ಭೇಟಿ ನೀಡಿದಾಗ ಶಿರಡಿಯ ದ್ವಾರಕಾಮಾಯಿಯಲ್ಲಿರುವಂತಹ ಮನಃಶಾಂತಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀ ರಾಘವೇಂದ್ರ ಸ್ವಾಮಿಗಳು ಹಾಗೂ ಶಿರಡಿ ಸಾಯಿಬಾಬಾ ಅವರ ಆಶೀರ್ವಾದದಿಂದ ‘ರಾಶಿ’ ಚಿತ್ರ ಯಶಸ್ಸು ಕಾಣಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ದಂಡಪ್ಪ ಬಿರಾದರ್ ಅವರು ಚಿತ್ರತಂಡವನ್ನು ಸ್ವಾಗತಿಸಿ, ಪುಸ್ತಕ ನೀಡಿ ಗೌರವಿಸಿದರು. ಮಂತ್ರಾಲಯಕ್ಕೆ ಆಗಮಿಸುವ ಚಲನಚಿತ್ರ ನಟರು ಹಾಗೂ ಗಣ್ಯರು ರಾಯಚೂರಿನ ಓಂ ಸಾಯಿ ಧ್ಯಾನ ಮಂದಿರಕ್ಕೂ ಭೇಟಿ ನೀಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಮಂದಿರದ ಸಂಸ್ಥಾಪಕ ಸಾಯಿಕಿರಣ್ ಆದೋನಿ ಗುರುಜಿ ಮಾತನಾಡಿ, ಹಿರಿಯ ನಟ ಶಶಿಕುಮಾರ್ ಅವರಂತೆ ಆದಿತ್ಯ ಶಶಿಕುಮಾರ್ ಕೂಡ ಕನ್ನಡ ಚಿತ್ರರಂಗದಲ್ಲಿ ಉತ್ತಮ ಹೆಸರು ಗಳಿಸಲಿ. ನಿರ್ಮಾಪಕ ಅಖಿಲೇಶ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಯಶಸ್ಸು ದೊರೆಯಲಿ ಎಂದು ಶುಭ ಹಾರೈಸಿದರು.
ಇದೇ ವೇಳೆ ಆದಿತ್ಯ ಶಶಿಕುಮಾರ್ ಅವರ ಹೆಸರಿನಲ್ಲಿ ವಿಶೇಷ ಅರ್ಚನೆ, ಪೂಜೆ ಹಾಗೂ ಮಂಗಳಾರತಿ ನೆರವೇರಿಸಲಾಯಿತು. ಚಿತ್ರತಂಡಕ್ಕೆ ಶನಿದೇವರ ಹಾಗೂ ದ್ವಾರಕಾಮಾಯಿಯ ದರ್ಶನ ಮಾಡಿಸಲಾಯಿತು.
ಪುನೀತ್ ರಾಜ್ಕುಮಾರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಾದಿಕ್ ಖಾನ್ ಅವರು ಚಿತ್ರದ ಪ್ರಚಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸುದರ್ಶನ್ ರೆಡ್ಡಿ, ರಾಜೇಶ್ ಮಡಿವಾಳ್, ಉಸ್ಮಾನ್, ಉಮಾಕಾಂತ್, ಮುನಿಸ್ವಾಮಿ, ಪರಮೇಶ್, ನವೀನ್, ಶ್ರೀಶೈಲ, ಬಸವನಗೌಡ ಸೇರಿದಂತೆ ಸಾಯಿಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.



