ರಾಯಚೂರು: ನಗರದ ಸೀಮಾಂತರದ ಸರ್ವೆ ನಂ. 911/7ರ ಜಮೀನಿನ ವಿಸ್ತೀರ್ಣವನ್ನು ಭೂ ದಾಖಲೆಗಳಲ್ಲಿ ತಪ್ಪಾಗಿ ನಮೂದಿಸಲಾಗಿದ್ದು, ಹಲವು ಬಾರಿ ಮನವಿ ಸಲ್ಲಿಸಿದರೂ ತಿದ್ದುಪಡಿ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿ ವಿರುದ್ಧ ರೂಪಾ ಶ್ರೀನಿವಾಸ ನಾಯಕ ದೂರು ಸಲ್ಲಿಸಿದ್ದಾರೆ.

ರಾಯಚೂರು ಸೀಮಾಂತರದ ಸರ್ವೆ ನಂ. 911/6ರಲ್ಲಿ ಮೂಲತಃ 4 ಗುಂಟೆ ಜಮೀನಿದ್ದು, ರಿಪೋಡಿ ಪ್ರಕ್ರಿಯೆ ಬಳಿಕ ಸರ್ವೆ ನಂ. 911/7ರಲ್ಲಿ 6 ಗುಂಟೆ ಎಂದು ಪಹಣಿಯಲ್ಲಿ ನಮೂದಿಸಲಾಗಿದೆ. ಹೆಚ್ಚುವರಿಯಾಗಿ 2 ಗುಂಟೆ ಜಮೀನು ಸೇರ್ಪಡೆಯಾಗಿರುವ ಕುರಿತು ಸಮರ್ಪಕ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮೂಲ ಮಾಲೀಕರಿಂದ 1997ರಲ್ಲಿ ಜಿ. ಮಲ್ಲಯ್ಯ ಅವರು ಜಮೀನು ಖರೀದಿಸಿದ್ದು, ಬಳಿಕ 2004ರಲ್ಲಿ ನವೋದಯ ಎಜುಕೇಶನ್ ಟ್ರಸ್ಟ್‌ನ ಎಸ್. ರಾಜೇಂದ್ರರೆಡ್ಡಿ ಅವರಿಗೆ 6 ಗುಂಟೆ ಎಂದು ಮಾರಾಟ ಮಾಡಲಾಗಿದೆ ಎಂಬ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಜಮೀನಿನ ಮೂಲ ಮಾಲೀಕರು ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬಗಳವರಾಗಿದ್ದು, ದಾಖಲೆಗಳಲ್ಲಿನ ವ್ಯತ್ಯಾಸದಿಂದ ಅವರಿಗೆ ಅನ್ಯಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಫೆಬ್ರವರಿ 26, ಜೂನ್ 29 ಹಾಗೂ ಜುಲೈ 19ರಂದು ವಿವಿಧ ಅರ್ಜಿದಾರರು ದೂರು ಸಲ್ಲಿಸಿದ್ದರೂ ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆತಿಲ್ಲ ಎಂದು ಆರೋಪಿಸಿದ್ದಾರೆ.

ಸರ್ವೆ ನಂ. 911/7ರ ಪಹಣಿಯಲ್ಲಿ ನಮೂದಿಸಿರುವ 6 ಗುಂಟೆ ವಿಸ್ತೀರ್ಣವನ್ನು ಪರಿಶೀಲಿಸಿ 4 ಗುಂಟೆಗೆ ತಿದ್ದುಪಡಿ ಮಾಡಬೇಕು. ಫಾರಂ ನಂ. 10, ನಕ್ಷೆ ಸೇರಿದಂತೆ ಸಂಬಂಧಿತ ದಾಖಲೆಗಳಲ್ಲಿನ ಲೋಪಗಳನ್ನು ಸರಿಪಡಿಸಿ ಮೂಲ ಮಾಲೀಕರಿಗೆ ನ್ಯಾಯ ಒದಗಿಸಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಪಿ. ಯಲ್ಲಪ್ಪ, ಎನ್.ಕೆ. ನಾಗರಾಜ್, ಕೆ. ಮಹದೇವಪ್ಪ, ಆರ್. ಹನುಮಂತು, ಕೆ.ಪಿ. ಅನಿಲ್ ಕುಮಾರ್, ಎಸ್. ರಾಜು, ಎಸ್. ವೆಂಕಟೇಶ್, ಪಿ. ನರಸಪ್ಪ, ಆರ್. ಆಂಜಿನೇಯ್ಯ, ನೀಲಕಂಠ, ಬಿ. ಗೋವಿಂದ್, ಆಶಣ್ಣ, ಭೋಜರಾಜ್, ಮಾರೆಪ್ಪ, ಸಚಿನ್ ಖಾನಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.