ಸಿಂಧನೂರು: ಗಿಡಮರಗಳ ಸಂರಕ್ಷಣೆಯ ಜೊತೆಗೆ ಪ್ರಾಣಿ-ಪಕ್ಷಿಗಳ ರಕ್ಷಣೆಯಲ್ಲಿಯೂ ನಿರಂತರವಾಗಿ ತೊಡಗಿಸಿಕೊಂಡಿರುವ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಅವರು ವಾಹನ ಡಿಕ್ಕಿಯಿಂದ ಗಾಯಗೊಂಡಿದ್ದ ಹಸುವಿಗೆ ಪಶುವೈದ್ಯರ ಮೂಲಕ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ನಗರದ ಆದರ್ಶ ಕಾಲೋನಿಯಲ್ಲಿ ಬಿಡಾಡಿ ದನಗಳು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಹಸುವೊಂದಕ್ಕೆ ವಾಹನ ಡಿಕ್ಕಿ ಹೊಡೆದು ಗಾಯಗೊಂಡಿತ್ತು. ಗಾಯಗೊಂಡ ಹಸುವನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ತಕ್ಷಣ ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪುರ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಮರೇಗೌಡ ಮಲ್ಲಾಪುರ ಅವರು ಹಸುವಿನ ಸ್ಥಿತಿಯನ್ನು ಪರಿಶೀಲಿಸಿ, ಅದಕ್ಕೆ ಅಗತ್ಯ ಚಿಕಿತ್ಸೆ ಒದಗಿಸಲು ಮುಂದಾದರು. ಸಿಂಧನೂರಿನ ಪಶುವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಅವರನ್ನು ಸಂಪರ್ಕಿಸಿ ಘಟನೆಯ ಕುರಿತು ಮಾಹಿತಿ ನೀಡಿದರು.
ಬಳಿಕ ಪಶು ಆಸ್ಪತ್ರೆಯ ಸಿಬ್ಬಂದಿ ರಾಜ ಅವರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಹಸುವನ್ನು ಪರೀಕ್ಷಿಸಿದರು. ಈ ಸಂದರ್ಭದಲ್ಲಿ ಹಸುವಿನ ಬಾಯಿಯಲ್ಲಿ ಹುಳುಗಳು ಕಾಣಿಸಿಕೊಂಡಿದ್ದು, ಮೈಮೇಲೆ ಚುಕ್ಕಿ ರೋಗದ ಲಕ್ಷಣಗಳೂ ಕಂಡುಬಂದವು. ಹಸುವಿನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಪಶು ಆಸ್ಪತ್ರೆಯ ಸಿಬ್ಬಂದಿ ಅಗತ್ಯ ಚಿಕಿತ್ಸೆ ನೀಡಿದರು.
ಅಪಘಾತಕ್ಕೊಳಗಾದ ಹಸುವನ್ನು ನಿರ್ಲಕ್ಷಿಸದೆ, ತಕ್ಷಣ ಸ್ಪಂದಿಸಿ ಪಶುವೈದ್ಯಕೀಯ ಚಿಕಿತ್ಸೆ ಕೊಡಿಸಲು ಮುಂದಾದ ಅಮರೇಗೌಡ ಮಲ್ಲಾಪುರ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಮೂಕಪ್ರಾಣಿಗಳ ನೋವಿಗೆ ಸ್ಪಂದಿಸುವ ಇಂತಹ ಮಾನವೀಯ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.
ವನಸಿರಿ ಫೌಂಡೇಷನ್ ಮೂಲಕ ಗಿಡಮರಗಳನ್ನು ಉಳಿಸಿ ಬೆಳೆಸುವುದು, ಪರಿಸರ ಸಂರಕ್ಷಣೆ ಹಾಗೂ ಹಸಿರು ವಾತಾವರಣ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಅಮರೇಗೌಡ ಮಲ್ಲಾಪುರ ಅವರು ಪ್ರಾಣಿ-ಪಕ್ಷಿಗಳ ರಕ್ಷಣೆಯಲ್ಲಿಯೂ ಆಸಕ್ತಿ ತೋರಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಎಂದರೆ ಕೇವಲ ಗಿಡಮರಗಳನ್ನು ಬೆಳೆಸುವುದಷ್ಟೇ ಅಲ್ಲ, ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಯನ್ನೂ ರಕ್ಷಿಸುವ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ತಮ್ಮ ಕಾರ್ಯಗಳ ಮೂಲಕ ಸಾರುತ್ತಿದ್ದಾರೆ ಎಂದು ಸ್ಥಳೀಯರು ಪ್ರಶಂಸಿಸಿದರು.
ಈ ಕುರಿತು ಮಾತನಾಡಿದ ಅಮರೇಗೌಡ ಮಲ್ಲಾಪುರ, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರು ತಮ್ಮ ವಚನದಲ್ಲಿ ‘ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ’ ಎಂದು ಸಾರಿದ್ದಾರೆ. ಸಕಲ ಜೀವಿಗಳ ಮೇಲೆ ಪ್ರೀತಿ, ಕರುಣೆ ಹಾಗೂ ದಯೆ ತೋರುವುದೇ ನಿಜವಾದ ಮಾನವೀಯತೆಯಾಗಿದೆ ಎಂದು ಹೇಳಿದರು.
ಮನುಷ್ಯನಂತೆ ಪ್ರಾಣಿ-ಪಕ್ಷಿಗಳಿಗೂ ಬದುಕುವ ಹಕ್ಕಿದೆ. ಅವುಗಳಿಗೆ ನೋವುಂಟಾದಾಗ ಸ್ಪಂದಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವ ಜಾನುವಾರುಗಳು ಹಾಗೂ ಇತರ ಪ್ರಾಣಿಗಳನ್ನು ನಿರ್ಲಕ್ಷಿಸದೆ, ತಕ್ಷಣ ಪಶುವೈದ್ಯಕೀಯ ನೆರವು ಒದಗಿಸಲು ಸಾರ್ವಜನಿಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಪರಿಸರ ಮತ್ತು ಜೀವಸಂಕುಲ ಪರಸ್ಪರ ಅವಲಂಬಿತವಾಗಿದ್ದು, ಪ್ರಕೃತಿಯ ಸಮತೋಲನ ಕಾಪಾಡಲು ಗಿಡಮರಗಳು ಹಾಗೂ ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಗಿಡಮರಗಳನ್ನು ಬೆಳೆಸಿ, ಮೂಕಪ್ರಾಣಿಗಳ ರಕ್ಷಣೆಗೆ ಕೈಜೋಡಿಸಬೇಕು. ಸಕಲ ಜೀವರಾಶಿಗಳ ಮೇಲೆ ದಯೆ ಮತ್ತು ಕರುಣೆ ತೋರುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅಮರೇಗೌಡ ಮಲ್ಲಾಪುರ ಕರೆ ನೀಡಿದರು.



