ರಾಯಚೂರು: ನಗರದ ಜಹೀರಾಬಾದ್ ಕಾಲೋನಿಯಲ್ಲಿರುವ ನೂರ್ ಷಾ ದರ್ಗಾಕ್ಕೆ ಸಂಬಂಧಿಸಿದ ವಕ್ಫ್ ಆಸ್ತಿಯ 1.11 ಎಕರೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗೆ ಮಾರಾಟ ಮಾಡಲಾಗಿದೆ ಎಂದು ರಾಯಚೂರು ವಕ್ಫ್ ರಕ್ಷಣಾ ಸಮಿತಿಯ ಅಕ್ಬರ್ ಹುಸೇನ್ ನಾಗುಂಡಿ ಗಂಭೀರ ಆರೋಪ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿಯಾಗಿ ಗುರುತಿಸಲ್ಪಟ್ಟಿರುವ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ವ್ಯವಹಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ನೋಂದಣಿ ಪ್ರಕ್ರಿಯೆಗೆ ಸಹಕರಿಸಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಹೀರಾಬಾದ್ ಕಾಲೋನಿಯಲ್ಲಿರುವ ನೂರ್ ಷಾ ದರ್ಗಾಕ್ಕೆ ಸೇರಿದ ಜಮೀನನ್ನು 1980ರಲ್ಲಿಯೇ ವಕ್ಫ್ ಆಸ್ತಿ ಎಂದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಹೀಗಿದ್ದರೂ ಕೆಲವರು ದಾಖಲೆಗಳನ್ನು ತಿರುಚಿ ಅಲ್ ಕರೀಂ ಶಿಕ್ಷಣ ಸಂಸ್ಥೆಗೆ ಜಮೀನು ಮಾರಾಟ ಮಾಡಿದ್ದಾರೆ. ವಕ್ಫ್ ಆಸ್ತಿಯ ಕಾನೂನುಬದ್ಧ ಸ್ವರೂಪವನ್ನು ಪರಿಶೀಲಿಸದೆ ಖಾಸಗಿ ಸಂಸ್ಥೆಯ ಹೆಸರಿಗೆ ನೋಂದಣಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದರು.

ವಿವಾದಿತ ಜಮೀನಿನ ಸಮೀಪ ಮಸೀದಿ, ಶಾದಿಮಹಲ್, ಮದರಸಾ ಹಾಗೂ ನೂರ್ ಷಾ ಖಾದ್ರಿ ಅವರ ಗೋರಿ ಅಸ್ತಿತ್ವದಲ್ಲಿವೆ. ಧಾರ್ಮಿಕ ಮತ್ತು ಸಮುದಾಯದ ಉದ್ದೇಶಗಳಿಗೆ ಸಂಬಂಧಿಸಿದ ಈ ಪ್ರದೇಶದಲ್ಲಿರುವ ಜಮೀನನ್ನು ಖಾಸಗಿ ಸಂಸ್ಥೆಗೆ ವರ್ಗಾಯಿಸಿರುವುದು ಸರಿಯಲ್ಲ. ವಕ್ಫ್ ಆಸ್ತಿಯ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ ಈ ವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.

ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಈ ಪ್ರಕರಣದಲ್ಲಿ ಜಮೀನಿನ ಮೂಲ ದಾಖಲೆಗಳು, ಗೆಜೆಟ್ ಅಧಿಸೂಚನೆ ಹಾಗೂ ಮಾರಾಟ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು. ಅಕ್ರಮ ನಡೆದಿರುವುದು ದೃಢಪಟ್ಟಲ್ಲಿ ನೋಂದಣಿಯನ್ನು ತಕ್ಷಣ ರದ್ದುಗೊಳಿಸಿ, ಜಮೀನನ್ನು ವಕ್ಫ್ ಆಸ್ತಿಯಾಗಿ ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವವರು ಹಾಗೂ ನೋಂದಣಿಗೆ ಅವಕಾಶ ಕಲ್ಪಿಸಿದ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು. ವಕ್ಫ್ ಆಸ್ತಿಗಳ ಅಕ್ರಮ ಪರಭಾರೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ವಕ್ಫ್ ಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಕ್ಬರ್ ಹುಸೇನ್ ನಾಗುಂಡಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮೌಲಾನಾ ಗುಲಾಮ್ ಬೇಗ್, ಸೈಯದ್ ಮುಸೀದ್ ಜಾನಿ, ಸೈಯದ್ ಸಮೀರ್ ಹುಸೇನಿ, ಸೈಯದ್ ಬೇಗ್ ಸೇರಿದಂತೆ ಇತರರು ಉಪಸ್ಥಿತರಿದ್ದರು.