ರಾಯಚೂರು: ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಾಗೂ ಜನರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಶಕ್ತಿ ರಂಗಭೂಮಿಗಿದೆ. ಇಂತಹ ಅರ್ಥಪೂರ್ಣ ಕಲೆಯನ್ನು ಉಳಿಸಿ ಬೆಳೆಸಲು ಕಲಾವಿದರ ಪರಿಶ್ರಮದ ಜೊತೆಗೆ ಪ್ರೇಕ್ಷಕರು ಹಾಗೂ ಕಲಾಭಿಮಾನಿಗಳ ನಿರಂತರ ಸಹಕಾರ ಅಗತ್ಯವಾಗಿದೆ ಎಂದು ಹಿರಿಯ ರಂಗಭೂಮಿ ಕಲಾವಿದ ವಿ.ಎನ್. ಅಕ್ಕಿ ಅಭಿಪ್ರಾಯಪಟ್ಟರು.
ನಗರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಹಾಗೂ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಯಚೂರು ಜಿಲ್ಲಾ ನಾಟಕೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕೋತ್ಸವದ ಅಂಗವಾಗಿ ಪ್ರದರ್ಶನಗೊಂಡ ‘ರಮಾಬಾಯಿ ಅಂಬೇಡ್ಕರ್’, ‘ಕಲ್ಯಾಣ ಕ್ರಾಂತಿಯ ಮುನ್ನುಡಿ’ ಹಾಗೂ ‘ಶಿವಶರಣ ಕಂಬಳಿ ನಾಗಿದೇವ’ ನಾಟಕಗಳು ಐತಿಹಾಸಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ. ಇಂತಹ ನಾಟಕಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸಿದಾಗ ಮಾತ್ರ ಅವುಗಳಲ್ಲಿ ಅಡಕವಾಗಿರುವ ಮೌಲ್ಯಗಳು ಮತ್ತು ಸಂದೇಶಗಳು ಸಮಾಜದ ವಿವಿಧ ವರ್ಗಗಳಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ರಂಗಸ್ವಾಮಿ ಅವರ ನೇತೃತ್ವದಲ್ಲಿ ಸಮಾಜಮುಖಿ ಚಿಂತನೆಗಳನ್ನು ಒಳಗೊಂಡ ನಾಟಕಗಳನ್ನು ಆಯೋಜಿಸಿರುವುದು ಪ್ರಶಂಸನೀಯ. ಪ್ರಸ್ತುತ ರಂಗಭೂಮಿ ಕಲಾವಿದರು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕಲಾವಿದರ ಪರಿಶ್ರಮಕ್ಕೆ ತಕ್ಕ ಮನ್ನಣೆ ಮತ್ತು ನೆರವು ದೊರೆಯದಿರುವುದು ವಿಷಾದನೀಯ. ಸಾರ್ವಜನಿಕರಲ್ಲಿ ರಂಗಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಕೂಡ ಕಳವಳಕಾರಿ ಬೆಳವಣಿಗೆಯಾಗಿದೆ ಎಂದರು.
ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ, ಸಮಾಜಕ್ಕೆ ಉತ್ತಮ ವಿಚಾರಗಳನ್ನು ಪರಿಚಯಿಸುವ ಪರಿಣಾಮಕಾರಿ ವೇದಿಕೆಯಾಗಿದೆ. ಕಲಾವಿದರ ಬದುಕಿಗೆ ಭದ್ರತೆ ಒದಗಿಸುವುದರ ಜೊತೆಗೆ ರಂಗಪ್ರದರ್ಶನಗಳಿಗೆ ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಯತ್ನ ನಡೆಯಬೇಕು. ಕಲಾವಿದರು ಮತ್ತು ಕಲಾಭಿಮಾನಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ರಂಗಭೂಮಿಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅಶೋಕ್ ಜೈನ್ ಮಾತನಾಡಿ, ರಾಯಚೂರು ಜಿಲ್ಲೆಯ ಅನೇಕ ಕಲಾವಿದರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲೆಗೆ ಗೌರವ ತಂದಿದ್ದಾರೆ. ಆದರೆ ರಂಗಭೂಮಿ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಕಲಾವಿದರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರ್ಹ ರಂಗಭೂಮಿ ಕಲಾವಿದರಿಗೆ ಸರ್ಕಾರದಿಂದ ಸೂಕ್ತ ಗೌರವ, ಪ್ರಶಸ್ತಿ ಹಾಗೂ ಸೌಲಭ್ಯಗಳು ದೊರೆಯುವಂತೆ ಒಗ್ಗಟ್ಟಿನಿಂದ ಮನವಿ ಸಲ್ಲಿಸಲಾಗುವುದು. ಕಲಾವಿದರಿಗೆ ಕೇವಲ ಮಾತಿನ ಪ್ರೋತ್ಸಾಹ ನೀಡುವುದಕ್ಕಿಂತ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುವುದು ಮುಖ್ಯವಾಗಿದೆ ಎಂದು ಕರೆ ನೀಡಿದರು.
ವಕೀಲ ಜಗದೀಶ್ ಮಾತನಾಡಿ, ರಂಗಸಿರಿ ಸೇರಿದಂತೆ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಸಂಘಟನೆಗಳು ಸಂಗೀತ, ನೃತ್ಯ, ನಾಟಕ ಹಾಗೂ ಜನಪದ ಕಲೆಗಳ ಬೆಳವಣಿಗೆಗೆ ಶ್ರಮಿಸುತ್ತಿವೆ. ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಕೆಲಸವೂ ನಡೆಯುತ್ತಿದೆ. ಇಂತಹ ಸಂಘಟನೆಗಳ ಚಟುವಟಿಕೆಗಳಿಗೆ ವಿದ್ಯಾವಂತರು, ಸಾಹಿತಿಗಳು, ಬುದ್ಧಿಜೀವಿಗಳು, ಜನಪ್ರತಿನಿಧಿಗಳು ಹಾಗೂ ಸಮಾಜದ ಮುಖಂಡರು ಕೈಜೋಡಿಸಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆತಾಗ ಜಿಲ್ಲೆಯ ಸಾಂಸ್ಕೃತಿಕ ಕ್ಷೇತ್ರ ಮತ್ತಷ್ಟು ಸಮೃದ್ಧವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಯಚೂರು ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಮಾತನಾಡಿ, ರಾಯಚೂರು ಜಿಲ್ಲೆ ಶಿಕ್ಷಣ, ರಾಜಕೀಯ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಅಪಾರ ಕಲಾಪ್ರತಿಭೆಗಳಿದ್ದರೂ ಸೂಕ್ತ ಅವಕಾಶ ಹಾಗೂ ಪ್ರೋತ್ಸಾಹದ ಕೊರತೆಯಿಂದ ಅನೇಕರು ತಮ್ಮ ಪ್ರತಿಭೆಯನ್ನು ವಿಶಾಲ ವೇದಿಕೆಯಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಗ್ರಾಮೀಣ ಕಲಾವಿದರನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯಲು ಅಗತ್ಯ ನೆರವು ಕಲ್ಪಿಸಬೇಕು. ರಂಗಸಿರಿ ಸಂಸ್ಥೆಯ ಅಧ್ಯಕ್ಷ ರಂಗಸ್ವಾಮಿ ಅವರು ಮೂರು ದಿನಗಳ ಕಾಲ ವೈಚಾರಿಕ ಮತ್ತು ಸಾಮಾಜಿಕ ಸಂದೇಶಗಳನ್ನು ಒಳಗೊಂಡ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಉತ್ತಮ ಸಾಂಸ್ಕೃತಿಕ ವಾತಾವರಣ ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ನಾಟಕ, ನೃತ್ಯ, ಜನಪದ ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಗಿಲ್ಲೆಸುಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ ಮಟಮಾರಿ, ಕರ್ನಾಟಕ ರಾಜ್ಯ ಮೀನುಗಾರಿಕೆ ಮಹಾಮಂಡಳಿ ಮೈಸೂರು ನಿರ್ದೇಶಕ ಸೈಯದ್ ಅಲಿ ಮನ್ಸಾಲಾಪುರ, ಕಲಾಪೋಷಕ ವಿಶ್ವನಾಥ ಪಾಟೀಲ್ ಆಲ್ಕೂರು, ಮಂದಾರ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಬಸವರಾಜ ದೊರೆ, ಈಶ್ವರ ಪ್ರಿಂಟರ್ಸ್ ಮಾಲೀಕ ರಾಮಲಿಂಗಪ್ಪ ಚಂದನಕೇರಿ, ಹಿರಿಯ ರಂಗಭೂಮಿ ಕಲಾವಿದ ಕೆ. ಬಸವಲಿಂಗಪ್ಪ ಹಾಗೂ ರಂಗಭೂಮಿ ಕಲಾವಿದ ಎಚ್. ಮಹದೇವ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಬಳಿಕ ರಾಯಚೂರಿನ ರಂಗ ಕಲಾವಿದರ ತಂಡದಿಂದ ಭಕ್ತಿಪ್ರಧಾನ ‘ಶಿವಶರಣ ಕಂಬಳಿ ನಾಗಿದೇವ’ ನಾಟಕ ಪ್ರದರ್ಶನಗೊಂಡಿತು. ಕಲಾವಿದರ ಅಭಿನಯದ ಮೂಲಕ ಶರಣ ಪರಂಪರೆಯ ಮೌಲ್ಯಗಳು ಹಾಗೂ ಭಕ್ತಿಯ ಸಂದೇಶವನ್ನು ಪ್ರೇಕ್ಷಕರಿಗೆ ಪರಿಚಯಿಸಲಾಯಿತು. ಇದರೊಂದಿಗೆ ಮೂರು ದಿನಗಳ ರಾಯಚೂರು ಜಿಲ್ಲಾ ನಾಟಕೋತ್ಸವಕ್ಕೆ ತೆರೆಬಿದ್ದಿತು.



