ಮಾನ್ವಿ: ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ಕೊನೆಯ ವಂತಿನ ನೀರನ್ನು ತಾಲೂಕಿನ ವಿವಿಧ ಉಪಕಾಲುವೆಗಳ ವ್ಯಾಪ್ತಿಯ ರೈತರ ಜಮೀನುಗಳಿಗೆ ಸಮರ್ಪಕವಾಗಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಜೋಳದ ಬೆಳೆ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಕಾಲುವೆ ನೀರು ಹಂಚಿಕೆ ಕುರಿತು ಆಯೋಜಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ಕಾಲುವೆ ನೀರಿನ ಸಮರ್ಪಕ ಹಂಚಿಕೆಗಾಗಿ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಕಾಲುವೆಗಳ ಮೇಲ್ವಿಚಾರಣೆಗೆ ನಿಯೋಜಿಸಲಾಗುವುದು. ಅಕ್ರಮವಾಗಿ ಕಾಲುವೆಯಿಂದ ನೀರು ಪಡೆದುಕೊಳ್ಳುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಕೊನೆಯ ಭಾಗದ ರೈತರಿಗೂ ನೀರು ತಲುಪುವಂತೆ ನೋಡಿಕೊಳ್ಳಲು ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಿರವಾರ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಲಕ್ಷ್ಮೀ ಮಾತನಾಡಿ, ನೀರಾವರಿ ಸಲಹಾ ಸಮಿತಿಯ ನಿರ್ಣಯದಂತೆ ಪ್ರತಿ ಉಪಕಾಲುವೆಗೆ ಮೂರು ದಿನಗಳಂತೆ ಸರದಿ ಪದ್ಧತಿಯಲ್ಲಿ ನೀರು ಹರಿಸಿ ನಂತರ ಬಂದ್ ಮಾಡಲಾಗುವುದು. ಎಡದಂಡೆ ಕಾಲುವೆಯಲ್ಲಿ ಅಗತ್ಯ ಪ್ರಮಾಣದ ನೀರಿನ ಮಟ್ಟ ಲಭ್ಯವಾಗದಿರುವುದು ಹಾಗೂ ಸಿಬ್ಬಂದಿ ಕೊರತೆಯ ನಡುವೆಯೂ ಉಳಿದಿರುವ ಒಂಬತ್ತು ದಿನಗಳಲ್ಲಿ ನೀರನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
82ನೇ ಉಪಕಾಲುವೆಯ ಪಿಒ 189ರವರೆಗಿನ ವ್ಯಾಪ್ತಿಯ ಗವಿಗಟ್ಟ ಹಾಗೂ ತಾಯಮ್ಮ ಕಟ್ಟೆ ಭಾಗದ ಜೋಳದ ಬೆಳೆಗಳಿಗೆ ಆದ್ಯತೆ ನೀಡಿ ಮಂಗಳವಾರದಿಂದ ಮೂರು ದಿನಗಳ ಕಾಲ ಸರದಿ ಪದ್ಧತಿಯಲ್ಲಿ ನೀರು ಹರಿಸಲಾಗುವುದು. 89ನೇ ಉಪಕಾಲುವೆ ವ್ಯಾಪ್ತಿಯ ನೀರಾಮಾನ್ವಿ, ಬೆಟ್ಟದೂರು ಹಾಗೂ ಬೆಟ್ಟದೂರು ತಾಂಡಾಗಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅದೇ ರೀತಿ 82ನೇ ಉಪಕಾಲುವೆಯ ಕೆಳಭಾಗದ ಜಾನೇಕಲ್, ಮಲ್ಲಿನಮಡಗು ಹಾಗೂ ನಸ್ಲಾಪುರ ವ್ಯಾಪ್ತಿಯ ರೈತರ ಜಮೀನುಗಳಿಗೆ ಮಂಗಳವಾರದಿಂದ ಮೂರು ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಉಪಕಾಲುವೆಗಳಲ್ಲಿ ನೀರಿನ ಮಟ್ಟವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಮುಖ್ಯ ಕಾಲುವೆಯಲ್ಲಿ 4.1 ಮೀಟರ್ ನೀರಿನ ಮಟ್ಟ ಕಾಯ್ದುಕೊಂಡಾಗ ಮಾತ್ರ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೆಲವರು ಟ್ರ್ಯಾಕ್ಟರ್ ಪಂಪ್ಗಳನ್ನು ಬಳಸಿ ಕಾಲುವೆಯಿಂದ ಅಕ್ರಮವಾಗಿ ನೀರು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಕಾಲುವೆ ನೀರನ್ನು ಬಳಸಿ ಕೆರೆಗಳನ್ನು ತುಂಬಿಸಿಕೊಳ್ಳಲಾಗುತ್ತಿದೆ. ಇಂತಹ ಅಕ್ರಮಗಳ ವಿರುದ್ಧ ನೀರಾವರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂದು ಆರೋಪಿಸಿದರು.
ಉಳಿದಿರುವ 12 ದಿನಗಳಲ್ಲಿ ಈ ಭಾಗದ ಜೋಳ ಹಾಗೂ ಮೆಣಸಿನಕಾಯಿ ಬೆಳೆಗಳಿಗೆ ಕೊನೆಯ ವಂತಿನ ನೀರು ತಲುಪದಿದ್ದರೆ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರಿಗಳು ನೀರು ಹಂಚಿಕೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಎಲ್ಲ ರೈತರಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ ಎಸ್. ಕೆಂಚರೆಡ್ಡಿ, ರೈತ ಮುಖಂಡರಾದ ದೊಡ್ಡಬಸವನಗೌಡ ಬಲ್ಲಟ್ಟಗಿ, ಸೂಗೂರಯ್ಯ ಆರ್.ಎಸ್. ಮಠ, ಬಸವನಗೌಡ ಮಲ್ಲಿನಮಡಗು, ಲಿಂಗಣ್ಣ ಪಾಟೀಲ್, ಬಸವನಗೌಡ ಮಾಲಿಪಾಟೀಲ್ ಬೆಟ್ಟದೂರು, ಶಂಕ್ರಪ್ಪಗೌಡ ದೇವತಗಲ್, ಕಾಡಪ್ಪ, ಶರಣಪ್ಪ, ವಿಕ್ರಮಗೌಡ ಗವಿಗಟ್ಟ, ಉಮೇಶ ಬೆಟ್ಟದೂರು, ಸಿದ್ದನಗೌಡ, ಕುಂಬಾರ ಮಾಯಪ್ಪ, ಮಲ್ಲಿಕಾರ್ಜುನಗೌಡ ಮಾಲಿಪಾಟೀಲ್, ಡಿ. ರಾಮಕೃಷ್ಣ, ಎಂ. ಶ್ರೀನಿವಾಸ, ಕೆ. ಬುಡ್ಡಣ್ಣ, ರುದ್ರಮೂರ್ತಿ, ಚನ್ನಬಸವ, ಮಹಾಂತೇಶ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.



