ಮದರ್ಕಲ್, ನ. 8: ಮದರ್ಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದೈವದ ಭಕ್ತರ ಒಗ್ಗಟ್ಟು ಮತ್ತು ಸಹಕಾರದಿಂದ ಅಂಬಾ ಮಠವನ್ನು ಸ್ಥಾಪಿಸಲಾಗಿದ್ದು, ಮಠದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಠದ ಕಾರ್ಯಚಟುವಟಿಕೆಗಳ ಬಗ್ಗೆ ಸಮರ್ಪಕ ಮಾಹಿತಿ ಪಡೆಯದೆ ಹೊರಗಿನ ಕೆಲವು ಸಂಘ-ಸಂಸ್ಥೆಗಳು ಹಾಗೂ ವ್ಯಕ್ತಿಗಳು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಗ್ರಾಮದ ಹಿರಿಯ ಮುಖಂಡ ಚಿನ್ನಪ್ಪ ದೊಡ್ಡಮನಿ ಹೇಳಿದರು.
ನ. 7ರಂದು ಅಂಬಾ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ದೈವದ ಭಕ್ತರೆಲ್ಲರೂ ಒಗ್ಗೂಡಿ ಮಠದಲ್ಲಿ ಅಂಬಾ ದೇವಿಯ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ. ಭಕ್ತರ ದೇಣಿಗೆ ಹಾಗೂ ಸಹಕಾರದಿಂದ ನೂತನ ತೇರು ನಿರ್ಮಿಸಲಾಗಿದ್ದು, ಮಹಿಳೆಯರು ತೇರು ಎಳೆಯುವ ರಥೋತ್ಸವವನ್ನೂ ನಡೆಸಲಾಗುತ್ತಿದೆ. ಇದಲ್ಲದೆ, ಸಾಮೂಹಿಕ ವಿವಾಹ, ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ, ಪ್ರತಿ ಹುಣ್ಣಿಮೆಯಂದು ಅನುಭಾವ ಕಾರ್ಯಕ್ರಮ ಹಾಗೂ ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಠದ ವತಿಯಿಂದ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಚಟುವಟಿಕೆಗಳು ಸಂಪೂರ್ಣವಾಗಿ ಭಕ್ತರ ಸಹಕಾರದಿಂದ ನಡೆಯುತ್ತಿವೆ. ಮಠವು ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಗ್ರಾಮದ ಹಾಗೂ ಸುತ್ತಮುತ್ತಲಿನ ಭಕ್ತರ ಶ್ರದ್ಧೆ ಮತ್ತು ಒಗ್ಗಟ್ಟಿನಿಂದ ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ ಎಂದು ವಿವರಿಸಿದರು.
ಅಂಬಾ ಮಠದ ತಾತನವರಾದ ನಾಮದೇವ ಗೌಡ ಶರಣರನ್ನು ಮದರ್ಕಲ್ ಗ್ರಾಮದ ಭಕ್ತರೇ ಗೌರವಪೂರ್ವಕವಾಗಿ ಕರೆತಂದು ಮಠದಲ್ಲಿ ಇರಿಸಿದ್ದಾರೆ. ಶರಣರ ವಚನಗಳು ಹಾಗೂ ಧಾರ್ಮಿಕ ಸಂದೇಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಅವರು ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕಾರ್ಯವೈಖರಿಯಲ್ಲಿ ಯಾವುದೇ ತಪ್ಪು ಕಂಡುಬಂದರೆ ಅವರನ್ನು ಕರೆತಂದ ಗ್ರಾಮದ ದೈವದ ಭಕ್ತರೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಹೀಗಿರುವಾಗ ಮಠದ ವಾಸ್ತವ ಪರಿಸ್ಥಿತಿ ಅರಿಯದೆ ಹೊರಗಿನವರು ಆರೋಪ ಮಾಡುವುದು ಸಮಂಜಸವಲ್ಲ ಎಂದು ಹೇಳಿದರು.
ಮಠ ಸ್ಥಾಪನೆಯಾಗಿರುವ ಪ್ರದೇಶದಲ್ಲಿ ಒಟ್ಟು 12 ಎಕರೆ ಸರ್ಕಾರಿ ಜಮೀನಿದ್ದು, ಈ ಪೈಕಿ ಎರಡು ಎಕರೆ ಜಮೀನನ್ನು ಮಠದ ಟ್ರಸ್ಟ್ಗೆ ಮಂಜೂರು ಮಾಡುವಂತೆ ಪಲಕನಮರಡಿ ಗ್ರಾಮ ಪಂಚಾಯಿತಿಯ ಸರ್ವಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಠರಾವು ಅಂಗೀಕರಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಮಾನಯ್ಯ ನಾಯಕ ಹಾಗೂ ಅಲಿಸಾಬು ಮದರ್ಕಲ್ ಮಾಹಿತಿ ನೀಡಿದರು.
ಮಠದ ಅಭಿವೃದ್ಧಿ ಕಾರ್ಯಗಳು ಭಕ್ತರ ಸಹಕಾರದಿಂದ ನಡೆಯುತ್ತಿದ್ದು, ಮಠದ ಹೆಸರಿನಲ್ಲಿ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಮಠದ ಕುರಿತು ಯಾವುದೇ ಹೇಳಿಕೆ ನೀಡುವ ಮೊದಲು ವಾಸ್ತವಾಂಶಗಳನ್ನು ತಿಳಿದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ದೈವದ ಇಚ್ಛೆಯಂತೆ ಮಠದ ಕಾರ್ಯಗಳು: ದೇವಣ್ಣ ಮಾಲಿ ಪಾಟೀಲ್
ಮದರ್ಕಲ್ ಗ್ರಾಮದ ಹಿರಿಯ ಮುಖಂಡ ದೇವಣ್ಣ ಮಾಲಿ ಪಾಟೀಲ್ ಮಾತನಾಡಿ, ಅಂಬಾ ಮಠವು ಮದರ್ಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ದೈವದ ಭಕ್ತರಿಗೆ ಸೇರಿದ ಮಠವಾಗಿದೆ. ಇಲ್ಲಿ ಯಾವುದೇ ವ್ಯಕ್ತಿಯ ವೈಯಕ್ತಿಕ ಇಚ್ಛೆಯಂತೆ ಕಾರ್ಯಚಟುವಟಿಕೆಗಳು ನಡೆಯುವುದಿಲ್ಲ. ದೈವದ ಇಚ್ಛೆ ಹಾಗೂ ಭಕ್ತರ ಒಗ್ಗಟ್ಟಿನೊಂದಿಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಜನರ ಕಲ್ಯಾಣವೇ ಮಠದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ನಾಮದೇವ ಗೌಡ ಶರಣರು ಮಠಕ್ಕೆ ಆಗಮಿಸಿದ ನಂತರ ಜಾತಿ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಗ್ರಾಮದ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕುರಿತು ಸರಿಯಾದ ಮಾಹಿತಿ ಪಡೆಯದೆ ಸಾರ್ವಜನಿಕರಲ್ಲಿ ತಪ್ಪು ಸಂದೇಶ ಹರಡುವುದು ಸರಿಯಲ್ಲ ಎಂದು ಹೇಳಿದರು.
ಹುಸೇನಸಾಬು ಟೆಂಟ್ಹೌಸ್ ಮಾತನಾಡಿ, ಅಂಬಾ ಮಠವನ್ನು ಗ್ರಾಮದ ದೈವದ ಭಕ್ತರೆಲ್ಲರೂ ಒಗ್ಗೂಡಿ ಸ್ಥಾಪಿಸಿದ್ದಾರೆ. ನಾಮದೇವ ಗೌಡ ಶರಣರ ಬಗ್ಗೆ ಗ್ರಾಮಸ್ಥರಲ್ಲಿ ಉತ್ತಮ ಅಭಿಪ್ರಾಯವಿದ್ದು, ಅವರ ಕಾರ್ಯಗಳ ಕುರಿತು ವಾಸ್ತವಾಂಶ ತಿಳಿದುಕೊಳ್ಳದೆ ಹೊರಗಿನವರು ತಪ್ಪು ಸಂದೇಶ ನೀಡಬಾರದು ಎಂದು ಮನವಿ ಮಾಡಿದರು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ಹೊಸೂರು ಮಾತನಾಡಿ, ಅಂಬಾ ಮಠದಲ್ಲಿ ನಾಮದೇವ ಗೌಡ ಶರಣರ ನೇತೃತ್ವದಲ್ಲಿ ಉತ್ತಮ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ. ಮಠದ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ ದುರ್ಗಪ್ಪ ಮಾತನಾಡಿ, ನಾಮದೇವ ಗೌಡ ಶರಣರನ್ನು ಗ್ರಾಮದ ಭಕ್ತರೇ ಗೌರವದಿಂದ ಮಠಕ್ಕೆ ಕರೆತಂದು ಶರಣರ ಸ್ಥಾನದಲ್ಲಿ ಕೂರಿಸಿದ್ದಾರೆ. ಅವರು ಜನರಿಗೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದು, ಅವರ ಬಗ್ಗೆ ಗ್ರಾಮಸ್ಥರು ಗೌರವ ಮತ್ತು ಅಭಿಮಾನ ಹೊಂದಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿನ್ನಪ್ಪ ದೊಡ್ಡಮನಿ, ದೇವಣ್ಣ ಮಾಲಿ ಪಾಟೀಲ್, ಸಾಹೇಬ್ ಗೌಡ ಪೊಲೀಸ್ ಪಾಟೀಲ್, ಶರಣಪ್ಪ ಮಾಲಿ ಪಾಟೀಲ್, ಮಾನಯ್ಯ, ಅಲಿಸಾಬ್, ರಾಮಣ್ಣ ಉಪ್ಪಾರ್, ಬಸವರಾಜ್ ಹೊಸೂರು, ಹನುಮಂತ ಬಡಿಗೇರ್, ಮುದ್ದಣ್ಣ, ತಿಪ್ಪಣ್ಣ, ರವಿ, ಶಿವಗೇನಿ, ಶರಣಪ್ಪ ಹೊಸಮನಿ, ಚನ್ನಬಸವ ದೊಡ್ಡಮನಿ, ರಂಗಪ್ಪ ಮಲ್ಲಪ್ಪ ಅಸರತಿ, ನಿಂಗಪ್ಪ ಬಾಗೂರು, ದಾವಲ್ಸಾಬ್, ಬಸವರಾಜ್ ಮಾತ್ಪಳ್ಳಿ, ಶಿವಣ್ಣ ಉಪ್ಪಾರ್, ಗಣೇಶ್ ಬಾಂಬೆ, ಹುಸೇನ್ ಬಾಷಾ ಸೇರಿದಂತೆ ಮದರ್ಕಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿವಿಧ ಸಮಾಜಗಳ ಹಿರಿಯರು, ಮುಖಂಡರು ಮತ್ತು ಅಂಬಾ ಮಠದ ಭಕ್ತರು ಉಪಸ್ಥಿತರಿದ್ದರು.



