ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದ ಶ್ರೀ ರುದ್ರಮುನೀಶ್ವರ ಮಠದಲ್ಲಿ ಶತಮಾನೋತ್ಸವದ ಅಂಗವಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ದಾಸೋಹ ಭವನಕ್ಕೆ ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು ಶಂಕುಸ್ಥಾಪನೆ ನೆರವೇರಿಸಿದರು.
ಶ್ರೀಮಠದ ಆವರಣದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ವಿವಿಧ ಮಠಗಳ ಮಠಾಧೀಶರು, ಗ್ರಾಮದ ಹಿರಿಯರು ಹಾಗೂ ಭಕ್ತರು ಭಾಗವಹಿಸಿದ್ದರು. ಶ್ರೀ ಅಭಿನವ ಮಹಾಂತ ಮಹಾಸ್ವಾಮಿಗಳು ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ನೂತನ ದಾಸೋಹ ಭವನದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.
ಶ್ರೀಮಠಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ನೂತನ ಭವನ ನಿರ್ಮಾಣಕ್ಕೆ ಮುಂದಾಗಲಾಗಿದೆ. ಧಾರ್ಮಿಕ ಕಾರ್ಯಕ್ರಮಗಳು, ಜಾತ್ರಾ ಮಹೋತ್ಸವಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಭವನ ಮಹತ್ವದ ಪಾತ್ರ ವಹಿಸಲಿದೆ.
ಶಂಕುಸ್ಥಾಪನೆ ಕಾರ್ಯಕ್ರಮದ ಬಳಿಕ ಒಳಬಳ್ಳಾರಿಯ ಶ್ರೀ ಚನ್ನಬಸವೇಶ್ವರ ಸುವರ್ಣಗಿರಿ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಪಾದಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಹಳೆಕೋಟೆ ಮರಿಶಿವಯೋಗಿಗಳ ಮಠದ ಶ್ರೀ ಸಿದ್ದಬಸವ ಮಹಾಸ್ವಾಮಿಗಳು, ಯದ್ದಲದೊಡ್ಡಿ ಸುವರ್ಣಗಿರಿ ಮಠದ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಮೈಸೂರಿನ ನಿರಂಜನ ದೇವರು, ಅಡವಿ ಅಮರೇಶ್ವರ ಸುವರ್ಣಗಿರಿ ಮಠದ ಶ್ರೀ ತೋಟಾಂದರ್ಯ ಮಹಾಸ್ವಾಮಿಗಳು, ಸುವರ್ಣಗಿರಿ ಮಠದ ಶಂಕರಯ್ಯ ಸ್ವಾಮಿ ಸೇರಿದಂತೆ ಗ್ರಾಮದ ಪ್ರಮುಖರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.



