ರಾಯಚೂರು, ನವೆಂಬರ್ 11 (ಕರ್ನಾಟಕ ವಾರ್ತೆ): ಇತಿಹಾಸದ ಪುಟಗಳಲ್ಲಿ ಸಾಹಸ, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ವೀರರಾಣಿ ಒನಕೆ ಓಬವ್ವ ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರು ಹೇಳಿದರು.
ನವೆಂಬರ್ 11ರಂದು ಬುಧವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರದುರ್ಗದ ಮದಕರಿ ನಾಯಕನ ಆಸ್ಥಾನದ ಇತಿಹಾಸವು ನಮ್ಮೆಲ್ಲರಿಗೂ ಸದಾ ಸ್ಫೂರ್ತಿದಾಯಕವಾಗಿದೆ. ಹೈದರಾಲಿಯ ಸೇನೆಯು ಚಿತ್ರದುರ್ಗದ ಕೋಟೆಯನ್ನು ಭೇದಿಸಲು ಎರಡು-ಮೂರು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಿರಲಿಲ್ಲ. ಕೊನೆಗೆ ಕಳ್ಳಮಾರ್ಗದಿಂದ ಕೋಟೆಯೊಳಗೆ ನುಗ್ಗಿ ವಿಜಯ ಸಾಧಿಸಲು ಹೈದರಾಲಿ ಮಾಡಿದ ಕುತಂತ್ರವನ್ನು ಓಬವ್ವ ಧೈರ್ಯದಿಂದ ಮೆಟ್ಟಿನಿಂತರು. ಕೋಟೆಯ ಕಾವಲುಗಾರ ಮುದ್ದಹನುಮಪ್ಪ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಕೋಟೆಯೊಳಗೆ ನುಗ್ಗುತ್ತಿದ್ದ ಶತ್ರು ಸೈನಿಕರನ್ನು ಒಬ್ಬೊಬ್ಬರಾಗಿ ಒನಕೆಯಿಂದ ಹೊಡೆದುರುಳಿಸಿ, ಕೋಟೆಯನ್ನು ಮತ್ತು ಸಾಮ್ರಾಜ್ಯವನ್ನು ರಕ್ಷಿಸಿದ ಆಕೆಯ ಸಾಹಸಗಾಥೆ ರೋಮಾಂಚನಕಾರಿಯಾಗಿದೆ ಎಂದರು.
ಒಬ್ಬ ಮಹಿಳೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನಾಡನ್ನು ರಕ್ಷಿಸಿದ ಆ ಶೌರ್ಯವು ಇಂದಿನ ಹೆಣ್ಣುಮಕ್ಕಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ಎಲ್ಲರಿಗೂ ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಇಂತಹ ವೀರಮಾತೆಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಹಿಳೆಯರು ಮುನ್ನಡೆಯಬೇಕಿದೆ ಎಂದು ತಿಳಿಸಿದರು.
ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲಿಯೂ ಧೈರ್ಯದಿಂದ ಮುನ್ನಡೆಯಬೇಕು. ಕಾನೂನುಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬ ಹೆಣ್ಣುಮಗಳೂ ಧೈರ್ಯವನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಮುಂಚೂಣಿಗೆ ಬರಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಯಚೂರು ತಹಶೀಲ್ದಾರ್ ಸುರೇಶ್ ವರ್ಮಾ ಮಾತನಾಡಿ, ದೇಶದ ರಕ್ಷಣೆಗಾಗಿ ಒನಕೆಯನ್ನೇ ಶಸ್ತ್ರವನ್ನಾಗಿಸಿಕೊಂಡ ಧೀರಮಾತೆ ಒನಕೆ ಓಬವ್ವ. ಇತಿಹಾಸದಲ್ಲಿ ರಾಜವಂಶಗಳಲ್ಲಿ ಜನಿಸಿ, ಯುದ್ಧ ತರಬೇತಿ ಪಡೆದು ಶತ್ರುಸೈನ್ಯವನ್ನು ಎದುರಿಸಿದ ಅನೇಕ ವೀರರಾಣಿಯರನ್ನು ಕಾಣುತ್ತೇವೆ. ಆದರೆ, ಒನಕೆ ಓಬವ್ವ ಯಾವುದೇ ರಾಜಮನೆತನದಲ್ಲಿ ಜನಿಸಿದವರಲ್ಲ. ಸೈನಿಕ ತರಬೇತಿ ಪಡೆದವರಲ್ಲ. ಶಸ್ತ್ರಾಸ್ತ್ರಗಳನ್ನು ಬಳಸುವ ಅಭ್ಯಾಸವೂ ಅವರಿಗಿರಲಿಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಹಿಳೆಯೊಬ್ಬರು ನಾಡಿನ ರಕ್ಷಣೆಯ ಅಗತ್ಯ ಎದುರಾದಾಗ ಅಸಾಮಾನ್ಯ ಸಾಹಸ ಮೆರೆದರು ಎಂದು ಹೇಳಿದರು.
ಮದಕರಿ ನಾಯಕನ ಕೋಟೆಯನ್ನು ವಶಪಡಿಸಿಕೊಳ್ಳಲು ಹೈದರಾಲಿಯ ಸೈನ್ಯ ಪ್ರಯತ್ನಿಸಿದ ಸಂದರ್ಭದಲ್ಲಿ ಒನಕೆ ಓಬವ್ವ ತಮ್ಮ ಪ್ರಾಣವನ್ನು ಲೆಕ್ಕಿಸದೆ ಶತ್ರುಸೈನಿಕರನ್ನು ಒಬ್ಬೊಬ್ಬರಾಗಿ ಒನಕೆಯಿಂದ ಹೊಡೆದುರುಳಿಸಿ ನಾಡನ್ನು ರಕ್ಷಿಸಿದರು. ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ದೇಶಾಭಿಮಾನ ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಇಂತಹ ವೀರವನಿತೆಯ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ. ಶರಣಪ್ಪ ಚಲವಾದಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿಯೂ ಮಹಿಳೆಯರು ತಮ್ಮ ಆತ್ಮಗೌರವ, ರಕ್ಷಣೆ ಹಾಗೂ ಹಕ್ಕುಗಳಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ. ಕಷ್ಟದ ಸಂದರ್ಭಗಳಲ್ಲಿ ಎದೆಗುಂದದೆ, ಒನಕೆ ಓಬವ್ವ ಅವರಂತಹ ವೀರನಾರಿಯರ ಧೈರ್ಯ, ಸಾಹಸ ಹಾಗೂ ಸಮಯಪ್ರಜ್ಞೆಯನ್ನು ಪ್ರತಿಯೊಬ್ಬ ಮಹಿಳೆಯೂ ಮೈಗೂಡಿಸಿಕೊಳ್ಳಬೇಕು. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಧೈರ್ಯದಿಂದ ನಿಲ್ಲುವ ಗುಣವೇ ನಿಜವಾದ ಸ್ತ್ರೀಶಕ್ತಿಯ ಪ್ರತೀಕವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿವಿಧ ಗಣ್ಯರಿಂದ ಮೆರವಣಿಗೆಗೆ ಚಾಲನೆ
ವೀರರಾಣಿ ಒನಕೆ ಓಬವ್ವ ಜಯಂತಿ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೋಪಾಲ ಗೆಣ್ಣೂರು ಸೇರಿದಂತೆ ವಿವಿಧ ಗಣ್ಯರು ಹಾಗೂ ಸಮಾಜದ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಡಾ. ಬಿ.ಆರ್. ಅಂಬೇಡ್ಕರ್ ಮಾರ್ಗವಾಗಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರಕ್ಕೆ ತಲುಪಿತು. ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಅಭಿಯಂತರ ಜೈಪಾಲ್ ರೆಡ್ಡಿ, ಸಮಾಜದ ಮುಖಂಡರಾದ ಮಲ್ಲೇಶ ಕೋಮಿನಿ, ಲಲಿತಾ ಅಂಜಿನೇಯ, ಜಗನ್ನಾಥ ಸುಂಕರಿ, ಅರ್ಚನಾ ಸುಂಕರಿ, ಸಂತೋಷ ನಂದಿ, ಮಾರೆಪ್ಪ, ಎಂ. ವಸಂತ, ದಯಾನಂದ, ಶಿವರಾಜ್, ವಿಶ್ವನಾಥ, ದೇವೇಂದ್ರ, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.



