ರಾಯಚೂರು, ನ.11: ಹಾಲು, ಮೊಸರು, ತುಪ್ಪ ಹಾಗೂ ಸಾರಿಗೆ ಬಸ್ಗಳ ಪ್ರಯಾಣ ದರ ಹೆಚ್ಚಳದಿಂದ ಜನಸಾಮಾನ್ಯರ ಜೀವನ ನಿರ್ವಹಣೆ ದುಸ್ತರವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐಎಂ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಟಿಪ್ಪು ಸುಲ್ತಾನ್ ಗಾರ್ಡನ್ನಲ್ಲಿ ಜಮಾಯಿಸಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜನಸಾಮಾನ್ಯರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ರಾಜ್ಯ ಸರ್ಕಾರ ಹಾಲು ಮತ್ತು ಮೊಸರಿನ ಬೆಲೆಯನ್ನು ಪ್ರತಿ ಲೀಟರ್ಗೆ ₹8 ಹಾಗೂ ತುಪ್ಪದ ಬೆಲೆಯನ್ನು ಪ್ರತಿ ಕೆ.ಜಿ.ಗೆ ₹104 ಹೆಚ್ಚಿಸಿದೆ. ಇದರೊಂದಿಗೆ ಬಸ್ ಪ್ರಯಾಣ ದರವನ್ನೂ ಏರಿಸಿರುವುದು ಬಡವರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ದಿನಗೂಲಿ ಕಾರ್ಮಿಕರ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಬರಗಾಲದ ಪರಿಣಾಮ ಕೃಷಿ ಮತ್ತು ಕೂಲಿ ಕೆಲಸಗಳನ್ನು ಅವಲಂಬಿಸಿರುವ ಅನೇಕ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಉದ್ಯೋಗಾವಕಾಶಗಳ ಕೊರತೆ ಹಾಗೂ ಆದಾಯ ಕುಸಿತದಿಂದ ಜೀವನ ಸಾಗಿಸುವುದೇ ಸವಾಲಾಗಿರುವ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿರುವುದು ಜನರ ಸಂಕಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ದೂರಿದರು.
ಹಾಲು ಉತ್ಪಾದಕರಿಗೆ ಆರ್ಥಿಕ ನೆರವು ನೀಡುವ ನೆಪದಲ್ಲಿ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ವಿಧಿಸುವುದು ಸಮಂಜಸವಲ್ಲ. ಹೈನುಗಾರಿಕೆಯನ್ನು ಅವಲಂಬಿಸಿರುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹8 ಸಹಾಯಧನ ನೀಡಬೇಕು. ಪಶು ಆಹಾರ ಸೇರಿದಂತೆ ಹಾಲು ಉತ್ಪಾದನೆಯ ವೆಚ್ಚ ತಗ್ಗಿಸಲು ವಿಶೇಷ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಾಲು ಒಕ್ಕೂಟಗಳು ಹಾಗೂ ಡೈರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹಣಕಾಸಿನ ಸೋರಿಕೆಯನ್ನು ನಿಯಂತ್ರಿಸುವ ಮೂಲಕ ಉತ್ಪಾದಕರ ಹಿತ ಕಾಪಾಡಬೇಕು. ಗ್ರಾಹಕರು ಮತ್ತು ಹಾಲು ಉತ್ಪಾದಕರು ಇಬ್ಬರಿಗೂ ಅನುಕೂಲವಾಗುವಂತಹ ನೀತಿಗಳನ್ನು ಸರ್ಕಾರ ರೂಪಿಸಬೇಕೆಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸುವಲ್ಲಿ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ದಿನನಿತ್ಯ ಬಳಕೆಯ ವಸ್ತುಗಳ ದುಬಾರಿ ದರದಿಂದ ಸಾಮಾನ್ಯ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚುತ್ತಿದೆ. ಕಾಳಸಂತೆ ವ್ಯಾಪಾರಕ್ಕೆ ಕಡಿವಾಣ ಹಾಕಿ, ಬೆಲೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬರಪೀಡಿತ ಪ್ರದೇಶಗಳ ಜನರಿಗೆ ತುರ್ತು ಪರಿಹಾರ ಒದಗಿಸುವುದರ ಜೊತೆಗೆ ಹಾಲು, ಮೊಸರು ಹಾಗೂ ಬಸ್ ಪ್ರಯಾಣ ದರ ಹೆಚ್ಚಳವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ, ತಾಲೂಕು ಕಾರ್ಯದರ್ಶಿ ಎಚ್. ಪದ್ಮಾ, ಡಿ.ಎಸ್. ಶರಣಬಸವ, ಕೆ. ಮಲ್ಲೇಶಪ್ಪ, ಬಸವಂತರಾಯ ಗೌಡ, ನರಸಣ್ಣ ನಾಯಕ, ಹನುಮಂತ ಮಡಲಗುಂಡಾ, ಗೋಕಾರಮ್ಮ, ನಿರ್ಮಲ, ನರಸಮ್ಮ, ಸುಜಾತ, ನರಸಿಂಹಲು, ಮಾರೆಪ್ಪ, ಮಹಾದೇವಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.



