ರಾಯಚೂರು: ನಗರದ ಎಲ್ವಿಡಿ ಕಾಲೇಜು ಹಾಗೂ ಕೆಎಸ್ಸಿಎ ಕ್ರಿಕೆಟ್ ಮೈದಾನಗಳಲ್ಲಿ ಆರಂಭವಾದ 14 ವರ್ಷದೊಳಗಿನವರ (ಅಂಡರ್-14) ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಯ 'ಬಿ' ಗುಂಪಿನ ಪಂದ್ಯಗಳಲ್ಲಿ ವಿಜಯಪುರ ಹಾಗೂ ಕೊಪ್ಪಳ ತಂಡಗಳು ಗೆಲುವು ಸಾಧಿಸಿವೆ.
ಎಲ್ವಿಡಿ ಕಾಲೇಜು ಮೈದಾನದಲ್ಲಿ ವಿಜಯಪುರ ಮತ್ತು ಕನ್ವೀನರ್ ಇಲೆವೆನ್ ತಂಡಗಳ ನಡುವೆ ಹಾಗೂ ಕೆಎಸ್ಸಿಎ ಮೈದಾನದಲ್ಲಿ ಕೊಪ್ಪಳ ಮತ್ತು ಕಲಬುರಗಿ ತಂಡಗಳ ನಡುವೆ ಪಂದ್ಯಗಳು ನಡೆದವು.
ಪಂದ್ಯಾವಳಿಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪವನ್ ಸುಖನಿ, ರಾಯಚೂರು ವಲಯದ ಮಾಜಿ ಕನ್ವೀನರ್ ಸೇತುಮಾಧವ್, ಜಿಲ್ಲಾ ಸಂಯೋಜಕ ಎನ್. ವಿನಾಯಕ್ ರಾವ್ ಚಾಲನೆ ನೀಡಿದರು.
ಎಲ್ವಿಡಿ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕನ್ವೀನರ್ ಇಲೆವೆನ್ ತಂಡವು 30.5 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 109 ರನ್ ಗಳಿಸಿತು. ತಂಡದ ಪರ ಅಕ್ಷಯ್ ಕುಮಾರ್ 36 ಎಸೆತಗಳಲ್ಲಿ 30 ರನ್ ಹಾಗೂ ದ್ವಿಜ್ ಸುಖನಿ 17 ಎಸೆತಗಳಲ್ಲಿ 12 ರನ್ ಗಳಿಸಿದರು.
ವಿಜಯಪುರ ತಂಡದ ಋಷಿಕೇಶ 8 ಓವರ್ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದು ಗಮನ ಸೆಳೆದರು.
110 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ವಿಜಯಪುರ ತಂಡದ ಪವನ್ದೀಪ್ 34 ಎಸೆತಗಳಲ್ಲಿ 74 ರನ್ ಸಿಡಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಸಾಮಜಿ ವಿಷ್ಣು 31 ಎಸೆತಗಳಲ್ಲಿ 28 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಕೆಎಸ್ಸಿಎ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಕೊಪ್ಪಳ ತಂಡವು ಕಲಬುರಗಿ ವಿರುದ್ಧ 28 ರನ್ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಪ್ಪಳ ತಂಡವು 44 ಓವರ್ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ತಂಡದ ಪರ ವಿವೇಕಾನಂದ 58 ಎಸೆತಗಳಲ್ಲಿ 55 ರನ್ ಹಾಗೂ ರಾಮಸೂರ್ಯ ನಾಯಕ 67 ಎಸೆತಗಳಲ್ಲಿ 54 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.
189 ರನ್ಗಳ ಗುರಿ ಬೆನ್ನಟ್ಟಿದ ಕಲಬುರಗಿ ತಂಡವು 31.5 ಓವರ್ಗಳಲ್ಲಿ 160 ರನ್ಗಳಿಗೆ ಆಲೌಟ್ ಆಯಿತು. ಕಲಬುರಗಿ ಪರ ದಿಗಂತ್ ವಿ. 67 ಎಸೆತಗಳಲ್ಲಿ 54 ರನ್ ಹಾಗೂ ಸುನಿಲ್ 53 ಎಸೆತಗಳಲ್ಲಿ 36 ರನ್ ಗಳಿಸಿದರು.
ಕೊಪ್ಪಳ ತಂಡದ ಸೌರಭ್ ಮತ್ತು ಸಲ್ಮಾನ್ ತಲಾ ಮೂರು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಉದ್ಘಾಟನಾ ಸಂದರ್ಭದಲ್ಲಿ ಉದ್ಯಮಿಗಳಾದ ಪ್ರಶಾಂತ್, ಅನಿಲ್, ಆಯ್ಕೆಗಾರರಾದ ಸಚಿನ್, ರಾಹುಲ್, ಹರಿಪ್ರಸಾದ್, ಪಂದ್ಯಾಧಿಕಾರಿಗಳಾದ ವಿಜಯ್ ಕುಮಾರ್ ಡಿ., ಸಿದ್ರಾಮ್, ಸಂಜಯ್ ಸೇರಿದಂತೆ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ರವಿರಾಜ್ ಬಿ.ಆರ್. ಕಾರ್ಯಕ್ರಮ ನಿರೂಪಿಸಿದರು.



