ರಾಯಚೂರು, ನ.11: ವೀರವನಿತೆ ಒನಕೆ ಓಬವ್ವ ಅವರ ಕಾಯಕನಿಷ್ಠೆ, ಧೈರ್ಯ, ಸಾಹಸ ಹಾಗೂ ದೇಶಪ್ರೇಮ ನಾಡಿನ ಪ್ರತಿಯೊಬ್ಬ ಮಹಿಳೆಗೂ ಆದರ್ಶವಾಗಿದ್ದು, ವಿದ್ಯಾರ್ಥಿನಿಯರು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಚನ್ನಬಸಮ್ಮ ಎಂ. ನಾಗಪ್ಪ ಬಾಲಕಿಯರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೆಂಕಟೇಶ ದೊಡ್ಡಮನಿ ಹೇಳಿದರು.

ನಗರದ ತಾರನಾಥ ಶಿಕ್ಷಣ ಸಂಸ್ಥೆಯ ಸಂಚಾಲಿತ ಸಿಎಂಎನ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗದ ಕೋಟೆಗೆ ಹೈದರಾಲಿಯ ಸೈನಿಕರು ನುಗ್ಗಲು ಪ್ರಯತ್ನಿಸಿದ ಸಂದರ್ಭದಲ್ಲಿ ಒನಕೆ ಓಬವ್ವ ಮನೆಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರು ಸೈನಿಕರನ್ನು ಎದುರಿಸಿ ಕೋಟೆಯ ರಕ್ಷಣೆಗೆ ಮುಂದಾದರು. ಅವರ ಸಮಯಪ್ರಜ್ಞೆ, ಶೌರ್ಯ ಹಾಗೂ ಸ್ವಾಭಿಮಾನ ಇಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದರು.

ಚಿತ್ರದುರ್ಗದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪ ಅವರ ಪತ್ನಿಯಾಗಿದ್ದ ಓಬವ್ವ, ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ ಅಸಾಮಾನ್ಯ ಸಾಹಸದಿಂದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ರಾಣಿ ಅಬ್ಬಕ್ಕ ಅವರಂತೆ ಓಬವ್ವ ಕೂಡ ನಾಡಿನ ವೀರವನಿತೆಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಉಪನ್ಯಾಸಕಿ ಸಲ್ಮಾ ಬಾನು ಮಾತನಾಡಿ, ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನವಾದ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನ ಆಚರಿಸಲಾಗುತ್ತದೆ. 1888ರಲ್ಲಿ ಮೆಕ್ಕಾದಲ್ಲಿ ಜನಿಸಿದ ಆಜಾದ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.

ಪ್ರಾಥಮಿಕ ಶಿಕ್ಷಣ, ವಯಸ್ಕರ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಆದ್ಯತೆ ನೀಡಿದ್ದ ಆಜಾದ್ ಅವರ ಸೇವೆಯನ್ನು ಪರಿಗಣಿಸಿ 1992ರಲ್ಲಿ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಅವರ ಶೈಕ್ಷಣಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಪಾರ್ವತಿ, ಸುಹಾಸಿನಿ ಹಾಗೂ ಕೆ. ಅಕ್ಷಿತಾ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು. ಶೈಲಾಶ್ರೀ ಪೂಜೆ ಸಲ್ಲಿಸಿದರು.

ಉಪನ್ಯಾಸಕರಾದ ಶಿವಲೀಲಾ, ರೇಣುಕಾ, ರಾಘಮ್ಮ, ವಿದ್ಯಾಶ್ರೀ, ಗೋವಿಂದರಾಜ್, ಭೀಮಣ್ಣ ಭಂಡಾರಿ, ಬೋಧಕೇತರ ಸಿಬ್ಬಂದಿ ಮಂಜುಳಾ, ಇಮ್ರಾನ್ ಪಾಷಾ, ರೋಹಿತ್, ಲಲಿತಮ್ಮ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.