ರಾಯಚೂರು: ನಗರದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗಿನಿ ಬಿ.ಕೆ. ಸ್ಮೀತಾ ಅಕ್ಕ ಹಾಗೂ ಕಾರ್ಯದರ್ಶಿ ಬಿ.ಕೆ. ಶಾರದಾ ಅಕ್ಕ ಅವರ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರಿಗೆ ಗೌರವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಸುಮಾರು 16 ಮಂದಿ ಕಟ್ಟಡ ಕಾರ್ಮಿಕರನ್ನು ಆಹ್ವಾನಿಸಿ, ವೇದಿಕೆಯಲ್ಲಿ ಸಭಿಕರಿಗೆ ಪರಿಚಯಿಸಲಾಯಿತು. ಕಾರ್ಮಿಕರೊಂದಿಗೆ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಯೋಗಿನಿ ಬಿ.ಕೆ. ಸ್ಮೀತಾ ಅಕ್ಕ, ಕಟ್ಟಡ ಕಾರ್ಮಿಕರು ದೇಶದ ನಿರ್ಮಾಣ ಕ್ಷೇತ್ರದ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ. ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಮಾಲೀಕರು ಹಣ, ಮರಳು, ಸಿಮೆಂಟ್, ಇಟ್ಟಿಗೆ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಾರೆ. ಆದರೆ ಅವುಗಳಿಗೆ ರೂಪ ನೀಡಿ ಸುಭದ್ರ ಕಟ್ಟಡ ನಿರ್ಮಿಸುವಲ್ಲಿ ಕಾರ್ಮಿಕರ ಶ್ರಮವೇ ಬಹುಮುಖ್ಯವಾಗಿದೆ. ಬಿಸಿಲು, ಮಳೆ ಎನ್ನದೆ ಬೆವರು ಸುರಿಸಿ ದುಡಿಯುವ ಅವರ ಸೇವೆ ಅತ್ಯಂತ ಶ್ರೇಷ್ಠವಾದದ್ದು ಎಂದು ಹೇಳಿದರು.

ಇತರರಿಗೆ ಭದ್ರವಾದ ಮನೆ ನಿರ್ಮಿಸಿಕೊಡುವ ಕಾರ್ಮಿಕರು ತಮ್ಮ ಮನಸ್ಸನ್ನೂ ದೃಢ ಹಾಗೂ ಏಕಾಗ್ರವಾಗಿಟ್ಟುಕೊಳ್ಳಬೇಕು. ಪ್ರತಿದಿನ ಕಾಮಗಾರಿ ಆರಂಭಿಸುವ ಮುನ್ನ ಹಾಗೂ ಕೆಲಸ ಮುಗಿಸಿದ ನಂತರ ಕನಿಷ್ಠ ಎರಡು ನಿಮಿಷ ಅದೇ ಸ್ಥಳದಲ್ಲಿ ದೇವರ ಸ್ಮರಣೆ ಅಥವಾ ಧ್ಯಾನ ಮಾಡಬೇಕು. ತಮಗೂ ಹಾಗೂ ಮನೆ ಕಟ್ಟಿಸಲು ಅವಕಾಶ ನೀಡಿದ ಮಾಲೀಕರ ಕುಟುಂಬಕ್ಕೂ ಸುಖ, ಶಾಂತಿ, ಆರೋಗ್ಯ ಮತ್ತು ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸಬೇಕು ಎಂದು ಸಲಹೆ ನೀಡಿದರು.

ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಜೊತೆಗೆ ಕೆಲಸದ ಸ್ಥಳದಲ್ಲೂ ಶಾಂತಿಯುತ ವಾತಾವರಣ ನಿರ್ಮಾಣವಾಗಿ, ಕಾಮಗಾರಿಯೂ ಸುಗಮವಾಗಿ ನಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಬಳಿಕ ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಿಲಕವಿಟ್ಟು, ಶಾಲು ಹಾಗೂ ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಕಾರ್ಮಿಕರೊಬ್ಬರು ಮಾತನಾಡಿ, ಸಮಾಜದಲ್ಲಿ ಕಟ್ಟಡ ಕಾರ್ಮಿಕರ ಶ್ರಮಕ್ಕೆ ನಿರೀಕ್ಷಿತ ಗೌರವ ಸಿಗುವುದಿಲ್ಲ. ಆದರೆ ನಮ್ಮನ್ನು ದೇವರ ಮನೆಗೆ ಆಹ್ವಾನಿಸಿ, ಇಂತಹ ಗೌರವಯುತ ವೇದಿಕೆಯಲ್ಲಿ ಸಮಾನವಾಗಿ ಕುಳ್ಳಿರಿಸಿ, ಕುಟುಂಬದ ಸದಸ್ಯರಂತೆ ಕಾಣಿಸಿಕೊಂಡು ಸನ್ಮಾನಿಸಿರುವುದು ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ. ಇಂತಹ ಗೌರವವನ್ನು ಹಿಂದೆ ಎಂದಿಗೂ ಪಡೆದಿರಲಿಲ್ಲ ಎಂದು ಭಾವುಕರಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಪರಿವಾರದವರು ಹಾಗೂ ಇತರರು ಉಪಸ್ಥಿತರಿದ್ದರು.