ರಾಯಚೂರು, ಸೆ.23: ವೇಗವಾಗಿ ಬದಲಾಗುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳ ನಡುವೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದ ಆಧಾರಿತ ಜೀವನಕ್ರಮವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ.ಎನ್. ನಂದಿತ ಹೇಳಿದರು.
ನಗರದ ಆಯುರ್ವೇದ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದರು.
ಔಷಧೋಪಚಾರದ ಜೊತೆಗೆ ಸರಿಯಾದ ಆಹಾರ ಕ್ರಮ, ನಿಯಮಿತ ವ್ಯಾಯಾಮ, ಸಮರ್ಪಕ ನಿದ್ರೆ ಹಾಗೂ ಶಿಸ್ತಿನ ದಿನಚರಿಯನ್ನು ಪಾಲಿಸುವುದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಯುರ್ವೇದ ಪದ್ಧತಿಯಲ್ಲಿ ಸೂಚಿಸಿರುವ ಆರೋಗ್ಯಕರ ಅಭ್ಯಾಸಗಳನ್ನು ದೈನಂದಿನ ಬದುಕಿನ ಭಾಗವನ್ನಾಗಿ ಮಾಡಿಕೊಂಡರೆ ಅನೇಕ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್ ಮಾತನಾಡಿ, ಇತ್ತೀಚೆಗೆ ಚಿಕ್ಕ ವಯಸ್ಸಿನವರಲ್ಲಿಯೂ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಿಂದಿನ ತಲೆಮಾರಿನವರು ಸರಳ ಆಹಾರ ಪದ್ಧತಿ, ದೈಹಿಕ ಪರಿಶ್ರಮ ಹಾಗೂ ನಿಯಮಿತ ಜೀವನಕ್ರಮದಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಆದರೆ ಆಧುನಿಕ ಜೀವನ ಪದ್ಧತಿಯಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದ್ದು, ಅನಾರೋಗ್ಯಕರ ಆಹಾರ ಸೇವನೆ ಹೆಚ್ಚುತ್ತಿದೆ ಎಂದು ಹೇಳಿದರು.
ಎಣ್ಣೆಯಲ್ಲಿ ಕರಿದ ಆಹಾರ, ಅತಿಯಾದ ಜಂಕ್ ಫುಡ್ ಹಾಗೂ ಅಸಮತೋಲನ ಆಹಾರ ಪದ್ಧತಿಗೆ ಕಡಿವಾಣ ಹಾಕಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ಪ್ರತಿಯೊಬ್ಬರೂ ತಮ್ಮ ಜೀವನಕ್ರಮದಲ್ಲಿ ಅಗತ್ಯ ಬದಲಾವಣೆ ತರಬೇಕು ಎಂದು ಸಲಹೆ ನೀಡಿದರು.
ಆಯುರ್ವೇದದ ಪ್ರಯೋಜನಗಳು, ನೈಸರ್ಗಿಕ ಚಿಕಿತ್ಸಾ ವಿಧಾನಗಳು ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಜನಸಾಮಾನ್ಯರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ವೈದ್ಯಕೀಯ ಸೇವೆ ಜನಪರವಾಗಿರಬೇಕು ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಶಂಕರಗೌಡ, ಆಯುರ್ವೇದ ವೈದ್ಯಾಧಿಕಾರಿ ಶಂಕರಗೌಡ ಐ. ಪಾಟೀಲ್, ಡಾ. ಅಂಜಾದ್ ಶರೀಫ್, ವಿಮಲ ಪಂಚಬಾವಿ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.



