ರಾಯಚೂರು, ಸೆ.22: ರಾಯಚೂರು ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ಭೇಟಿ ನೀಡಿದ ದಕ್ಷಿಣ ಮಧ್ಯ ರೈಲ್ವೆಯ ಹಿರಿಯ ಅಧಿಕಾರಿಗಳಾದ ಡಿ. ಅಂಜನೇಯಲು ರೆಡ್ಡಿ, PCE/SCR ಹಾಗೂ ವರುಣ್ ಬಾಬು, Sr.DEN/Co-ord/SC ಅವರು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.
ಈ ವೇಳೆ ದಕ್ಷಿಣ ಮಧ್ಯ ರೈಲ್ವೆ ಮಜ್ದೂರ್ ಯೂನಿಯನ್ (SCRMU) ರಾಯಚೂರು ಶಾಖೆಯ ಪದಾಧಿಕಾರಿಗಳು ರೈಲ್ವೆ ಸಿಬ್ಬಂದಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಕುಂದುಕೊರತೆಗಳ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈಲ್ವೆ ಸಿಬ್ಬಂದಿ ವಾಸಿಸುವ ಕ್ವಾರ್ಟರ್ಸ್ ಪ್ರದೇಶಗಳಲ್ಲಿ ಸಮರ್ಪಕ ಮೂಲಸೌಕರ್ಯಗಳ ಕೊರತೆ, ರಸ್ತೆ ಹಾಗೂ ಚರಂಡಿ ಸಮಸ್ಯೆ, ಹಳೆಯ ರೈಲ್ವೆ ಕ್ವಾರ್ಟರ್ಸ್ಗಳ ದುರಸ್ತಿ ಮತ್ತು ನಿರ್ವಹಣೆ ಸೇರಿದಂತೆ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಯೂನಿಯನ್ ಪದಾಧಿಕಾರಿಗಳು ಒತ್ತಾಯಿಸಿದರು.
ಸಿಬ್ಬಂದಿ ವಸತಿ ಪ್ರದೇಶಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ, ಅಗತ್ಯ ದುರಸ್ತಿ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಬಂಧಿಸಿದ ವಿಭಾಗಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಕೋರಲಾಯಿತು.
ಈ ಸಂದರ್ಭದಲ್ಲಿ SCRMU ರಾಯಚೂರು ಶಾಖೆಯ ಕಾರ್ಯದರ್ಶಿ ಜಂಬಣ್ಣ, ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಖಜಾಂಚಿ ಚನ್ನ ವೀರಣ್ಣ ಅವರು ರೈಲ್ವೆ ಸಿಬ್ಬಂದಿಯ ಸಮಸ್ಯೆಗಳ ಕುರಿತ ಮನವಿಯನ್ನು PCE/SCR ಡಿ. ಅಂಜನೇಯಲು ರೆಡ್ಡಿ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ SCRMU ರಾಯಚೂರು ಶಾಖೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ರೈಲ್ವೆ ಸಿಬ್ಬಂದಿ ಉಪಸ್ಥಿತರಿದ್ದರು.



