ರಾಯಚೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಪಕ್ಷ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ರೀತಿಯಲ್ಲಿ ಅಪಪ್ರಚಾರ ನಡೆಸುತ್ತಿದೆ. ನಕಲಿ ಹಾಗೂ ಅಕ್ರಮ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆರವುಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, SIR ಪ್ರಕ್ರಿಯೆ ಆರಂಭವಾದ ದಿನದಿಂದಲೂ ಕಾಂಗ್ರೆಸ್ ವಿವಿಧ ಆರೋಪಗಳನ್ನು ಮಾಡುತ್ತಿದೆ. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವುದು ಕಾನೂನುಬದ್ಧ ಪ್ರಕ್ರಿಯೆಯಾಗಿದ್ದು, ಅದನ್ನೇ ತಪ್ಪಾಗಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

SIR ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಫಾರ್ಮ್-6, ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರು ಅಥವಾ ಅನರ್ಹ ಮತದಾರರ ಹೆಸರು ತೆರವುಗೊಳಿಸಲು ಫಾರ್ಮ್-7 ಹಾಗೂ ವಿಳಾಸ, ಹೆಸರು, ವಯಸ್ಸು ಸೇರಿದಂತೆ ಮತದಾರರ ವಿವರಗಳ ತಿದ್ದುಪಡಿಗೆ ಫಾರ್ಮ್-8 ಬಳಸಲು ಅವಕಾಶವಿದೆ. ಈ ನಿಯಮಗಳ ಅನ್ವಯ ಆಕ್ಷೇಪಣೆ ಸಲ್ಲಿಸುವುದು ಪ್ರತಿಯೊಬ್ಬರಿಗೂ ಇರುವ ಕಾನೂನುಬದ್ಧ ಹಕ್ಕಾಗಿದೆ ಎಂದು ವಿವರಿಸಿದರು.

ಕಾಂಗ್ರೆಸ್ ಪಕ್ಷವೂ ಇದೇ ನಿಯಮಗಳಡಿ ಆಕ್ಷೇಪಣೆಗಳನ್ನು ಸಲ್ಲಿಸಿದೆ. ಆದರೆ ಬಿಜೆಪಿ ವತಿಯಿಂದ ಆಕ್ಷೇಪಣೆ ಸಲ್ಲಿಸಿದಾಗ ಅದನ್ನು ರಾಜಕೀಯವಾಗಿ ಬಿಂಬಿಸಲಾಗುತ್ತಿದೆ. ನಕಲಿ ಹಾಗೂ ಅನರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ತೆರವಾಗುವ ಆತಂಕದಿಂದ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

SIR ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಕೆಲವೆಡೆ ಸಮುದಾಯ ಭವನಗಳು, ಧಾರ್ಮಿಕ ಸ್ಥಳಗಳು ಹಾಗೂ ಇತರ ಕಡೆ ಸಾಮೂಹಿಕವಾಗಿ ಅರ್ಜಿಗಳನ್ನು ಭರ್ತಿ ಮಾಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚಾಮರಾಜಪೇಟೆ, ರಾಮನಗರ, ಕುಣಿಗಲ್, ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ ನಿಯಮಬಾಹಿರವಾಗಿ ಅರ್ಜಿಗಳನ್ನು ಭರ್ತಿ ಮಾಡಿಸಲಾಗಿದೆ ಎಂಬ ಆರೋಪಗಳಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ರಘು ಕೌಟಿಲ್ಯ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ನಕಲಿ ಜನನ ಹಾಗೂ ವಾಸಸ್ಥಳ ಪ್ರಮಾಣಪತ್ರಗಳನ್ನು ಸೃಷ್ಟಿಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ವರದಿಗಳೂ ಹೊರಬಂದಿದ್ದವು. ಇಂತಹ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಆದರೆ ರಾಜ್ಯ ಸರ್ಕಾರ ಈ ವಿಷಯಗಳಲ್ಲಿ ಗಂಭೀರತೆ ತೋರಿಲ್ಲ ಎಂದು ದೂರಿದರು.

ಮತದಾರರ ಪಟ್ಟಿಯಲ್ಲಿ ಯಾವುದೇ ಭಾರತೀಯ ಅರ್ಹ ನಾಗರಿಕರ ಹೆಸರು ಅನ್ಯಾಯವಾಗಿ ಕೈಬಿಡಬಾರದು. ಅದೇ ವೇಳೆ ಮೃತಪಟ್ಟವರು, ಸ್ಥಳಾಂತರಗೊಂಡವರು, ನಕಲಿ ನೋಂದಣಿ ಹೊಂದಿರುವವರು ಹಾಗೂ ಮತದಾರರಾಗಲು ಕಾನೂನುಬದ್ಧ ಅರ್ಹತೆ ಇಲ್ಲದವರ ಹೆಸರು ಪಟ್ಟಿಯಲ್ಲಿ ಉಳಿಯಬಾರದು. ಪಾರದರ್ಶಕ ಮತ್ತು ನಿಖರ ಮತದಾರರ ಪಟ್ಟಿ ಪ್ರಜಾಪ್ರಭುತ್ವದ ಮೂಲಭೂತ ಅಗತ್ಯವಾಗಿದೆ ಎಂದರು.

ಚುನಾವಣಾ ಆಯೋಗವು ಸಂವಿಧಾನ ಮತ್ತು ಜನಪ್ರತಿನಿಧಿ ಕಾಯ್ದೆಯಡಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುತ್ತಿದೆ. ಈ ಪ್ರಕ್ರಿಯೆಯನ್ನು ರಾಜಕೀಯ ದೃಷ್ಟಿಯಿಂದ ನೋಡುವ ಬದಲು ಅರ್ಹ ಮತದಾರರಿಗೆ ಮತದಾನದ ಹಕ್ಕು ಖಾತ್ರಿಪಡಿಸುವ ಹಾಗೂ ಅನರ್ಹ ಹೆಸರುಗಳನ್ನು ತೆರವುಗೊಳಿಸುವ ಪ್ರಕ್ರಿಯೆಯಾಗಿ ನೋಡಬೇಕು ಎಂದು ಹೇಳಿದರು.

ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಈಗ ಪ್ರಶ್ನೆಗಳನ್ನು ಎತ್ತುತ್ತಿದೆ. ಆದರೆ ಹಿಂದೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಯಲ್ಲಿಯೂ ಮತದಾರರ ಪಟ್ಟಿಯ ಪರಿಷ್ಕರಣೆಗಳು ನಡೆದಿವೆ. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ ಕುರಿತು ಮಾತನಾಡುವ ಕಾಂಗ್ರೆಸ್ ತನ್ನ ಹಿಂದಿನ ಆಡಳಿತಾವಧಿಯ ನಡೆಗಳನ್ನೂ ಅವಲೋಕಿಸಿಕೊಳ್ಳಬೇಕು ಎಂದು ಟೀಕಿಸಿದರು.

SIR ಹೆಸರಿನಲ್ಲಿ ಯಾವುದೇ ಅರ್ಹ ಮತದಾರರಿಗೆ ಅನ್ಯಾಯವಾಗಬಾರದು ಎಂಬುದರ ಜೊತೆಗೆ ನಕಲಿ ಮತ್ತು ಅಕ್ರಮ ನೋಂದಣಿಗೂ ಅವಕಾಶ ನೀಡಬಾರದು. ಕಾನೂನುಬದ್ಧ ಮತದಾರರ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿ ಬದ್ಧವಾಗಿದ್ದು, ಮತದಾರರ ಪಟ್ಟಿಯ ಶುದ್ಧೀಕರಣಕ್ಕೆ ಸಂಬಂಧಿಸಿದ ಹೋರಾಟವನ್ನು ಸಂವಿಧಾನದ ಚೌಕಟ್ಟಿನಲ್ಲಿಯೇ ಮುಂದುವರಿಸಲಿದೆ ಎಂದು ರಘು ಕೌಟಿಲ್ಯ ತಿಳಿಸಿದರು.

ಈ ಸಂದರ್ಭದಲ್ಲಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿಷ್ಣುವರ್ಧನ್ ರೆಡ್ಡಿ ದಿನ್ನಿ, ಜಿಲ್ಲಾ ವಕ್ತಾರ ಸಿದ್ದನಗೌಡ ನೆಲಹಾಳ್, ನರಸಪ್ಪ ಯಾಕ್ಲಾಸಪುರ, ವೆಂಕಟೇಶ್ ಉಪ್ಪಾರ, ಬಸವರಾಜ್ ಉಪಸ್ಥಿತರಿದ್ದರು.